ಮಂಜೇಶ್ವರ: ಅಪಘಾತದಲ್ಲಿ ಮರಣವನ್ನಪ್ಪಿದ ವ್ಯಕ್ತಿಯ ಆಶ್ರಿತರಿಗೆ 28 ಲಕ್ಷ ರೂ. ಪರಿಹಾರ ಘೋಷಿಸಿ ಕಾಸರಗೋಡು ವಾಹನ ಅಪಘಾತ ವಿಮಾ ನ್ಯಾಯಾಲಯ ತೀರ್ಪು ನೀಡಿದೆ. ಕೇರಳದಲ್ಲೇ ವಾಹನ ಅಪಘಾತ ಪ್ರಕರಣವೊಂದರಲ್ಲಿ ಇಷ್ಟೊಂದು ದೊಡ್ಡ ಮೊತ್ತ ನಷ್ಟಪರಿಹಾರ ಘೋಷಿಸಿರುವುದು ವಿರಳ ಎನ್ನಲಾಗಿದೆ.
ಮಂಜೇಶ್ವರದ ಕಡಂಬಾರು ನಿವಾಸಿ ಜೆರಾಲ್ಡ್ ಡಿ'ಸೋಜಾ (48) ಎಂಬವರ ಕುಟುಂಬಕ್ಕೆ 24,15,800 ರೂ. ಪರಿಹಾರ ಧನವನ್ನು ದುರಂತ ನಡೆದ ದಿನದಿಂದ ವಾರ್ಷಿಕ ಒಂಭತ್ತು ಶೇಕಡಾ ಬಡ್ಡಿ ಸಹಿತ ನೀಡುವಂತೆ ನ್ಯಾಯಾಲಯವು ವಿಮಾ ಕಂಪೆನಿಗೆ ಆದೇಶಿಸಿದೆ. ಇದರಂತೆ ಒಟ್ಟು ಪರಿಹಾರ ಮೊತ್ತ 28 ಲಕ್ಷ ರೂ.ಗಳಾಗುವುದು. ಜೆರಾಲ್ಡ್ ಡಿ"ಸೋಜಾರ ಪತ್ನಿ ಪ್ರೇಮಲತಾ ಪ್ರೆಸಿಲ್ಲಾ ಮೊಂತೇರೋ (43), ಮಕ್ಕಳಾದ ಅಯಾಸ್ತಿನ್ ಡಿ"ಸೋಜಾ (14), ಆರೋನ್ ಡಿ" ಸೋಜಾ (ಎಂಟು), ಆದಿನ್ ಡಿ" ಸೋಜಾ (ಏಳು), ತಂದೆ ಹೆನ್ರಿ ಡಿ"ಸೋಜಾ (78) ಹಾಗೂ ತಾಯಿ ಹೆಲನ್ ಡಿ" ಸೋಜಾ (68) ಎಂಬವರಿಗೆ ಈ ಮೊತ್ತವನ್ನು ನೀಡುವಂತೆ ಕೋರ್ಟು ತನ್ನ ಆದೇಶದಲ್ಲಿ ನಿರ್ದೇಶಿಸಿದೆ.
2017 ರ ಡಿ. 20 ರಂದು ಕಡಂಬಾರ್ ಸಮೀಪ ಸಂಭವಿಸಿದ ದುರಂತದಲ್ಲಿ ಜೆರಾಲ್ಡ್ ಡಿ" ಸೋಜಾ ಅವರು ಮೃತಪಟ್ಟಿದ್ದರು. ತನ್ನ ಬೈಕಿನಲ್ಲಿ ಮನೆಯಿಂದ ಪೇಟೆ ಕಡೆಗೆ ಇವರು ತೆರಳುತ್ತಿದ್ದಾಗ ಎದುರು ಬದಿಯಿಂದ ಬರುತ್ತಿದ್ದ ಸ್ಕೂಟರ್ ಬೈಕಿಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಹೆರಾಲ್ಡ್ ಸಾವನ್ನಪ್ಪಿದ್ದರು. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಸಂತ್ರಸ್ತರ ಪರವಾಗಿ ಕಾಸರಗೋಡಿನ ಹಿರಿಯ ವಕೀಲರಾದ ನ್ಯಾಯವಾದಿ ಎಂ.ಎಸ್. ಥೋಮಸ್ ಡಿ" ಸೋಜಾ ವಾದಿಸಿದ್ದರು.

