ಮಂಜೇಶ್ವರ: ಪಕ್ಷದ ಬೇಡಿಕೆಗಳ ಹೊರತಾಗಿಯೂ ಮಂಜೇಶ್ವರ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಚುನಾವಣಾ ಕಣಕ್ಕಿಳಿಯುವುದಿಲ್ಲ ಎಂದು ಬಿಜೆಪಿ ಮುಖಂಡ ಕುಂಟಾರು ರವೀಶ ತಂತ್ರಿ ಅವರು ಹೇಳಿದ್ದಾರೆ. ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಅವರು ಪ್ರತಿಕ್ರಿಯಿಸಿ ಕೆ. ಸುರೇಂದ್ರನ್ ಮಂಜೇಶ್ವರದಲ್ಲಿ ಸ್ಪರ್ಧಿಸಿದರೆ ಗೆಲುವು ಖಚಿತ ಎಂದು ಹೇಳಿದರು. ದೀರ್ಘಕಾಲಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರವಿದ್ದ ರವೀಶ ತಂತ್ರಿ ಅವರು ಚುನಾವಣಾ ಅವಧಿಯಲ್ಲಿ ಮತ್ತೆ ಸಕ್ರಿಯರಾಗುತ್ತಿದ್ದಾರೆ.
ಇತ್ತೀಚೆಗೆ ನಡೆದ ಮಂಜೇಶ್ವರ ಉಪಚುನಾವಣೆಯಲ್ಲಿ ಸಕ್ರಿಯರಾಗಿದ್ದ ತಂತ್ರಿಗಳು ಆ ಬಳಿಕ ಪಕ್ಷದ ಜಿಲ್ಲಾ ನಾಯಕತ್ವದೊಂದಿಗಿನ ಭಿನ್ನಮತದಿಂದ ಪಕ್ಷದ ಚಟುವಟಿಕೆಗಳಿಂದ ದೂರವಿದ್ದರು ಎನ್ನಲಾಗಿದೆ. ರಾಜ್ಯ ನಾಯಕತ್ವದ ರಾಜಿ ಪ್ರಯತ್ನಗಳ ಹೊರತಾಗಿಯೂ ಸಮಸ್ಯೆ ಮುಂದುವರೆಯಿತು. ಅಂತಿಮವಾಗಿ ಅವರು ಪಕ್ಷದ ರಾಜ್ಯ ಸಮಿತಿಯ ಸದಸ್ಯರಾದರು. ಆದರೆ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿರಲಿಲ್ಲ. ಜೊತೆಗೆ ಅವರು ಈ ಬಾರಿ ಸ್ಪರ್ಧಿಸುವುದಿಲ್ಲ. ಆದರೆ ಚಟುವಟಿಕೆಗಳಲ್ಲಿ ಗರಿಷ್ಠ ಸಕ್ರಿಯನಾಗಿರುವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಪಕ್ಷದ ರಾಜ್ಯ ಅಧ್ಯಕ್ಷರು ಮಂಜೇಶ್ವರದಿಂದ ಸ್ಪರ್ಧಿಸಬೇಕೆಂದು ನಾನು ಬಯಸುತ್ತೇನೆ. ಆ ಬಗ್ಗೆ ನನಗೆ ಹೆಚ್ಚು ಭರವಸೆ ಇದೆ ಎಂದವರು ತಿಳಿಸಿದ್ದಾರೆ.
ರವೀಶ ತಂತ್ರಿ ಈ ಹಿಂದೆ ಕಾಸರಗೋಡು ಲೋಕಸಭಾ ಕ್ಷೇತ್ರ ಮತ್ತು ಮಂಜೇಶ್ವರ, ಕಾಸರಗೋಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.



