ನವದೆಹಲಿ: ಫೆಬ್ರವರಿಯಿಂದ ದೇಶದಲ್ಲಿ ಕೋವಿಡ್-19 ದೈನಂದಿನ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದ್ದು, ಎರಡನೇ ಅಲೆಯ ಸ್ಪಷ್ಟ ಸಂಕೇತವಾಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಕ್ ವರದಿ ಮಾಡಿದೆ.
ಸಂಶೋಧನಾ ವರದಿ ಪ್ರಕಾರ, ಎರಡನೇ ಅಲೆ 100 ದಿನಗಳವರೆಗೆ ಇರುವ ಸಾಧ್ಯತೆಯಿದೆ. ಸ್ಥಳೀಯ ಲಾಕ್ ಡೌನ್ ಪರಿಣಾಮಕಾರಿಯಾಗಿಲ್ಲ, ಕೋವಿಡ್-19 ನಿಯಂತ್ರಿಸುವ ಏಕೈಕ ಮಾರ್ಗವೆಂದರೆ ವ್ಯಾಕ್ಸಿನೇಷನ್ ವೇಗವನ್ನು ಹೆಚ್ಚಿಸುವುದಾಗಿದೆ ಎಂದು ಹೇಳಿದೆ.
ಮೊದಲ ಅಲೆಯ ಸಮಯದಲ್ಲಿ ದೈನಂದಿನ ಹೊಸ ಪ್ರಕರಣಗಳ ಗರಿಷ್ಠ ಹಂತದ ದಿನಗಳ ಸಂಖ್ಯೆಯನ್ನು ಪರಿಗಣಿಸಿದಾಗ, ಏಪ್ರಿಲ್ ದ್ವಿತೀಯಾರ್ಧದಲ್ಲಿ ಅದು ಉತ್ತುಂಗಕ್ಕೇರುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
24 ಗಂಟೆಗಳ ಅವಧಿಯಲ್ಲಿ 53,476 ಹೊಸ ಪ್ರಕರಣಗಳೊಂದಿಗೆ ಕೇವಲ 2 ದಿನಗಳಲ್ಲಿ ದೇಶದಲ್ಲಿ 1 ಲಕ್ಷ ಕೊರೋನಾ ವೈರಸ್ ಸೋಂಕಿತರು ದಾಖಲಾಗಿದ್ದಾರೆ. ಇದರಿಂದಾಗಿ ದೇಶಾದ್ಯಂತ ಒಟ್ಟಾರೆ 1,17, 87,534 ಪ್ರಕರಣಗಳು ಕಂಡುಬಂದಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.
ಸತತ 15 ದಿನವೂ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಒಟ್ಟು ಸೋಂಕಿತರ ಸಂಖ್ಯೆ ಶೇ. 3.35 ರಷ್ಟಿದ್ದು, ಚೇತರಿಕೆ ಪ್ರಮಾಣ ಶೇ.95.28ಕ್ಕೆ ಇಳಿದಿದೆ ಎಂದು ಮಾಹಿತಿ ನೀಡಲಾಗಿದೆ. ಮೊದಲ ಅಲೆಯಿಗಿಂತಲೂ ಎರಡನೇ ಅಲೆ ತೀವ್ರವಾಗಿರುವುದಾಗಿ ಜಾಗತಿಕ ಕೋವಿಡ್-19 ಅನುಭವಗಳು ತೋರುತ್ತಿದ್ದರೂ, ಲಸಿಕೆ ತಯಾರಿಕೆಯಿಂದ ಪ್ರಸ್ತುತ ಪರಿಸ್ಥಿತಿ ಭಿನ್ನವಾಗಿದೆ. ಹೀಗೆ ಭಾರತ ಅತ್ಯುತ್ತಮವಾಗಿ ಪರಿಸ್ಥಿತಿಯನ್ನು ನಿರ್ವಹಿಸಲಿದೆ ಎಂದು 28 ಪುಟಗಳ ವರದಿಯಲ್ಲಿ ಹೇಳಿದೆ.
ಲಾಕ್ ಡೌನ್ ಪರಿಣಾಮಕಾರಿಯಲ್ಲದಿದ್ದರೂ ಸಾಮೂಹಿಕ ಲಸಿಕೆ ಉಳಿದಿರುವ ಏಕೈಕ ಮಾರ್ಗವಾಗಿದೆ. ಮಹಾರಾಷ್ಟ್ರ ಮತ್ತು ಪಂಜಾಬ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಇದು ಕಂಡುಬರುತ್ತದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ವರದಿಯಲ್ಲಿ ತಿಳಿಸಲಾಗಿದೆ.



