ಕೊಚ್ಚಿ: ಮಹಿಳಾ ಕಾರ್ಯಕರ್ತರನ್ನು ಶಬರಿಮಲೆಗೆ ಪ್ರವೇಶಿಸಲು ರಾಜ್ಯ ಸರ್ಕಾರ ಬೆಂಬಲ ನೀಡಿದೆ ಎಂದು ಕೇರಳ ಹೈಕೋರ್ಟ್ ಬೊಟ್ಟುಮಾಡಿದೆ. ಶಬರಿಮಲೆ ಪ್ರವೇಶಿಸಿದ್ದ ಬಿಂದು ಅಮ್ಮಿಣಿ ಕಾರ್ಯಕರ್ತೆಯೇ ಹೊರತು ಭಕ್ತಳಲ್ಲ ಎಂದು ನ್ಯಾಯಾಲಯ ಗಮನಿಸಿದೆ. ಶಬರಿಮಲೆ ಮಹಿಳಾ ಪ್ರವೇಶ ವಿರುದ್ದ ಪ್ರತಿಭಟನೆ ವೇಳೆ ಮುಖದ ಮೇಲೆ ಮೆಣಸಿನ ಹುಡಿ ಸಿಂಪಡಿಸಿದ ದೂರಿನ ಹಿನ್ನೆಲೆಯಲ್ಲಿ ಬಿಂದು ಅಮ್ಮಿನಿಯ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿ ಈ ರೀತಿ ಅಭಿಪ್ರಾಯಪಟ್ಟಿದೆ.
2019 ರ ನವೆಂಬರ್ 26 ರಂದು ಬೆಳಿಗ್ಗೆ 7.30 ರ ಸುಮಾರಿಗೆ ಎರ್ನಾಕುಳಂ ನಗರ ಮಹಿಳಾ ಪೋಲೀಸ್ ಆಯುಕ್ತರ ಕಚೇರಿಯಲ್ಲಿ ತೃಪ್ತಿ ದೇಸಾಯಿ ಅವರೊಂದಿಗೆ ಶಬರಿಮಲೆಗೆ ತೆರಳಲು ರಕ್ಷಣೆ ಕೋರಿ ಆಗಮಿಸಿದಾಗ ಇವರ ಮೇಲೆ ಈ ದಾಳಿ ನಡೆದಿದೆ ಎಂದು ದೂರಲ್ಲಿ ತಿಳಿಸಲಾಗಿದೆ. ಘಟನೆ ನಡೆದ 11 ತಿಂಗಳ ನಂತರ ಬಿಜೆಪಿ ನಾಯಕರ ಮೇಲೆ ಆರೋಪ ಹೊರಿಸಲಾಗಿದೆ ಎಂದು ನ್ಯಾಯಾಲಯ ಅಚ್ಚರಿ ವ್ಯಕ್ತಪಡಿಸಿತು. ನ್ಯಾಯಮೂರ್ತಿ ಸುಧೀಂದ್ರ ಕುಮಾರ್ ಅವರು, ದೂರುದಾರರ ಆರೋಪಗಳು ಪ್ರಾಥಮಿಕ ನೋಟದಲ್ಲಿ ದುರುದ್ದೇಶಪೂರಿತವಾಗಿವೆ ಎಂದು ಹೇಳಿದರು.
ಮಹಿಳಾ ಕಾರ್ಯಕರ್ತರನ್ನು ಶಬರಿಮಲೆಗೆ ಪ್ರವೇಶಿಸುವುದನ್ನು ವಿರೋಧಿಸಿ ಬಿಜೆಪಿ, ಆರ್‍ಎಸ್‍ಎಸ್ ಮತ್ತು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆದರೆ, ಮಹಿಳಾ ಕಾರ್ಯಕರ್ತರ ಪ್ರವೇಶವನ್ನು ಕೇರಳ ಸರ್ಕಾರ ಬೆಂಬಲಿಸಿದೆ ಎಂದು ನ್ಯಾಯಾಲಯ ಹೇಳಿದೆ.



