ಬದಿಯಡ್ಕ: ಇಂದಿನ ಸಮಾಜದಲ್ಲಿ ಶಾಲಾಗುಣಮಟ್ಟ ಗುರುತಿಸುವಿಕೆಗೂ ಕಾರಣವಾಗಿರುವ ಎಲ್.ಎಸ್.ಎಸ್ ಹಾಗೂ ಯು.ಎಸ್.ಎಸ. ಪರೀಕ್ಷೆಗಳ ಉತ್ತಮ ಫಲಿತಾಂಶದ ಸಾಧನೆಗೆ ತರಬೇತಿ ಅತೀಮುಖ್ಯ. ಈ ನಿಟ್ಟಿನಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕುಂಬಳೆ ಉಪಜಿಲ್ಲಾ ಘಟಕದ ನೇತೃತ್ವದಲ್ಲಿ ನಡೆಯುತ್ತಿರುವ ಶಿಕ್ಷಕರ ಈ ನಿಸ್ವಾರ್ಥ ಸೇವೆ ಇತರ ಸಂಘಟನೆಗಳಿಗೂ ಮಾದರಿ ಎಂದು ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ ಹೇಳಿದರು.
ಅವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕುಂಬಳೆ ಉಪಜಿಲ್ಲಾ ಘಟಕದ ವತಿಯಿಂದ ನಡೆಯುವ ಜ್ಞಾನಯಾನ (ಎಲ್.ಎಸ್.ಎಸ್-ಯು.ಎಸ್.ಎಸ್. ಪರೀಕ್ಷಾ ಆನ್ ಲೈನ್ ತರಗತಿ)ಪರೀಕ್ಷಾ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಜ್ಞಾನಯಾನ ತರಗತಿ ಪ್ರಸಾರಕ್ಕಾಗಿ ಸಂಘಟನೆಯ ಕುಂಬಳೆ ಉಪಜಿಲ್ಲಾ ಘಟಕದ ಅಧಿಕೃತ ಯೂ-ಟ್ಯೂಬ್ ಚಾನೆಲ್ ನ್ನು ಪೆರಡಾಲ ಸರ್ಕಾರಿ ಹೈಸ್ಕೂಲಿನ ಮುಖ್ಯೋಪಾಧ್ಯಾಯ ರಾಜಗೋಪಾಲ ಲೋಕಾರ್ಪಣೆಗೊಳಿಸಿದರು. ಕುಂಬಳೆ ಉಪಜಿಲ್ಲಾ ಬಿಪಿಸಿ ಶಿವರಾಮ ಶುಭಹಾರೈಸಿದರು.
ಸಂಘಟನೆಯ ಕುಂಬಳೆ ಉಪಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀಶ ಕುಮಾರ ಸ್ವಾಗತಿಸಿ, ನಿರೂಪಿಸಿದರು. ಕೋಶಾಧಿಕಾರಿ ಶರತ್ ಕುಮಾರ್ ವಂದಿಸಿದರು. ಜ್ಞಾನಯಾನದ ಸಂಚಾಲಕ ರಾಜೇಶ್ ಉಬ್ರಂಗಳ, ತಾಂತ್ರಿಕ ವಿಭಾಗದ ಚಂದ್ರಶೇಖರ, ನಿಶಿತ್ ಮಾಸ್ತರ್ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಕೃಷ್ಣೋಜಿ ರಾವ್, ಕುಂಬಳೆ ಉಪಜಿಲ್ಲೆಯ ವಿವಿಧ ಶಾಲಾ ವೃತ್ತಿ ನಿರತ ಶಿಕ್ಷಕ ಶಿಕ್ಷಕಿಯರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.




