HEALTH TIPS

ಕುಲಾಂತರಿ ಬೆಳೆಗಳ ಪ್ರಯೋಗಕ್ಕಿಲ್ಲ ಅವಕಾಶ

           ನವದೆಹಲಿ: ಆರ್​ಎಸ್​ಎಸ್ ಅಂಗಸಂಸ್ಥೆ ಭಾರತೀಯ ಕಿಸಾನ್ ಸಂಘದ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ, ಕುಲಾಂತರಿ ಬೆಳೆಗಳ ವೈಜ್ಞಾನಿಕ ಪ್ರಯೋಗ ಕೈಗೊಳ್ಳುವ ನಿರ್ಧಾರದಿಂದ ಹಿಂದೆ ಸರಿದಿದೆ. ದೇಶೀಯವಾಗಿ ಅಭಿವೃದ್ಧಿ ಪಡಿಸಿದ ಬಿಟಿ ಬದನೆ ಸೇರಿ ಯಾವುದೇ ಕುಲಾಂತರಿ ತಳಿಗಳ ಪ್ರಯೋಗಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.


          ಜೆನೆಟಿಕ್ ಇಂಜಿನಿಯರಿಂಗ್ ಅಪ್ರೖೆಸಲ್ ಕಮಿಟಿ (ಜಿಇಎಸಿ) ಕಳೆದ ವರ್ಷ ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಛತ್ತೀಸಗಢ, ಜಾರ್ಖಂಡ್, ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳಗಳಲ್ಲಿ 2020-23ರ ಅವಧಿಯಲ್ಲಿ ಬಿಟಿ ಬದನೆಯ ಎರಡು ಮಾದರಿಗಳ ವೈಜ್ಞಾನಿಕ ಪ್ರಯೋಗಕ್ಕೆ ಅನುಮತಿ ನೀಡಿತ್ತು. ಭಾರತೀಯ ಕಿಸಾನ್ ಸಂಘ ಮತ್ತು ಇತರ ರೈತ ಸಂಘಟನೆಗಳು ಇದನ್ನು ವಿರೋಧಿಸಿದ್ದವು.

ಸತತ ಏಳು ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿಯೋಗವನ್ನು ಕರೆದೊಯ್ದು ಬಿಟಿ ಬದನೆಯ ವೈಜ್ಞಾನಿಕ ಕ್ಷೇತ್ರ ಪ್ರಯೋಗಕ್ಕೆ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್​ಒಸಿ) ನೀಡದಂತೆ ಮನವಿ ಮಾಡಿದ್ದವು. ತಮಿಳುನಾಡು ವಿವಸಾಯಿಗಳ್ ಸಂಗಂ ಕೂಡ ಕುಲಾಂತರಿ ತಳಿಗಳ ಪ್ರಯೋಗಕ್ಕೆ ಎನ್​ಒಸಿ ನೀಡಬಾರದು ಎಂದು ರಾಜ್ಯ ಸರ್ಕಾರಗಳನ್ನು ಆಗ್ರಹಿಸಿತ್ತು. ಈ ಮನವಿಗಳ ಸಂಕ್ಷಿಪ್ತ ಮಾಹಿತಿಯನ್ನು ಕೇಂದ್ರ ಪರಿಸರ ಸಚಿವ ಪ್ರಕಾಶ ಜಾವಡೇಕರ್ ಸೋಮವಾರ ರಾಜ್ಯಸಭೆಗೆ ಲಿಖಿತ ರೂಪದಲ್ಲಿ ನೀಡಿದ್ದು, ಬಿಟಿ ಬದನೆ ಸೇರಿ ಯಾವುದೇ ಕುಲಾಂತರಿ ತಳಿಗಳ ಪ್ರಯೋಗದ ಪ್ರಸ್ತಾವನೆಯನ್ನು ಜಿಇಎಸಿ ನೀಡಿರುವ ಶಿಫಾರಸು ಆಧರಿಸಿ ತೆಗೆದುಕೊಳ್ಳಲಾಗದು. ಆಯಾ ರಾಜ್ಯ/ಕೇಂದ್ರಾಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಲಾಗುತ್ತದೆ ಎಂದಿದ್ದಾರೆ.

ಕ್ಷೇತ್ರ ಪ್ರಯೋಗ ಯಾಕೆ?: ಇಂತಹ ಬೆಳೆಗಳ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಾದರೆ ವೈಜ್ಞಾನಿಕ ಕ್ಷೇತ್ರ ಪ್ರಯೋಗ ಆಗಿರಬೇಕು ಎಂಬ ನಿಯಮವಿದೆ.

                ಜಿಇಎಸಿ ಹೇಳಿದ್ದೇನು?

      ಬಿಟಿ ಬದನೆ ಸೇರಿ ಕುಲಾಂತರಿ ತಳಿಗಳ ವೈಜ್ಞಾನಿಕ ಕ್ಷೇತ್ರ ಪ್ರಯೋಗ ಮಾಡುವ ಮುನ್ನ ಆಯಾ ರಾಜ್ಯ ಸರ್ಕಾರದಿಂದ ಎನ್​ಒಸಿ ಪಡೆಯುವುದು ಮುಖ್ಯ. ಪ್ರತ್ಯೇಕವಾಗಿರುವ ಜಮೀನು ಗುರುತಿಸಿ ಬೇರಾವುದೇ ತೊಂದರೆ ಆಗುವುದಿಲ್ಲ ಎಂಬುದನ್ನು ಖಾತರಿಪಡಿಸಿ ಕೊಂಡೇ ಈ ಪ್ರಯೋಗ ಮಾಡಬೇಕು ಎಂದು ಜಿಇಎಸಿ ತನ್ನ ಆದೇಶದಲ್ಲಿ ಹೇಳಿದೆ.

                  ಪರಿಗಣನೆಯಲ್ಲಿದ್ದ ಕುಲಾಂತರಿ ಬೆಳೆ

ಕರ್ನಾಟಕ -ಹತ್ತಿ

ಪಂಜಾಬ್ - ಸಾಸಿವೆ, ಜೋಳ

ಹರಿಯಾಣ - ಜೋಳ,ಹತ್ತಿ

ರಾಜಸ್ಥಾನ - ಹತ್ತಿ

ದೆಹಲಿ - ಸಾಸಿವೆ

ಗುಜರಾತ್ - ಹತ್ತಿ, ಜೋಳ

ಮಹಾರಾಷ್ಟ್ರ - ಹತ್ತಿ, ಜೋಳ, ಬದನೆ, ಭತ್ತ

ಆಂಧ್ರಪ್ರದೇಶ - ಹತ್ತಿ, ಕಡಲೆ

(ಬಿಟಿ ಹತ್ತಿಯನ್ನು ವಾಣಿಜ್ಯವಾಗಿ ಬೆಳೆಯುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ಅದು ಬಿಟ್ಟರೆ ಬೇರಾವುದೇ ಬೆಳೆಗೆ ವಾಣಿಜ್ಯ ಅನುಮತಿ ನೀಡಿಲ್ಲ ಎಂದು ಸರ್ಕಾರ ಸಂಸತ್ತಿಗೆ ತಿಳಿಸಿದೆ).


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries