ನವದೆಹಲಿ: ಪಂಜಾಬ್ನಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ.
117 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪಂಜಾಬ್ನಲ್ಲಿ ಬಿಜೆಪಿ, ಪಂಜಾಬ್ ಲೋಕ ಕಾಂಗ್ರೆಸ್, ಸಂಯುಕ್ತ ಶಿರೋಮಣಿ ಅಕಾಲಿ ದಳ ಮೈತ್ರಿ ಮಾಡಿಕೊಂಡಿವೆ.
ಪಂಜಾಬ್ ವಿಧಾನಸಭೆಗೆ ಫೆಬ್ರುವರಿ 20 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
'ಪಂಜಾಬ್ಗೆ ವಿಶೇಷ ಆದ್ಯತೆ ಸಿಗಬೇಕಿದೆ. ಭದ್ರತೆಯು ಪಂಜಾಬ್ನ ಗಂಭೀರ ಸಮಸ್ಯೆಯಾಗಿದೆ. ಈ ಚುನಾವಣೆಯು ಸ್ಥಿರತೆ ಮತ್ತು ಸುರಕ್ಷತೆಗಾಗಿ ನಡೆಯುತ್ತಿದೆ. ಪಂಜಾಬ್ ಅನ್ನು ಮರಳಿ ಹಳಿಗೆ ತರುವುದು ನಮ್ಮ ಧ್ಯೇಯ' ಎಂದು ಜೆಪಿ ನಡ್ಡಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 1984ರ ಗಲಭೆಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿದರು. ಅದರ ಪರಿಣಾಮವಾಗಿ ಇಂದು ಆರೋಪಿಗಳು ಜೈಲಿನಲ್ಲಿದ್ದಾರೆ. ಪಂಜಾಬ್ನಲ್ಲಿ 'ಮಾಫಿಯಾ ರಾಜ್' ನಿರ್ಮೂಲನೆ ಮಾಡುತ್ತೇವೆ ಎಂದೂ ನಡ್ಡಾ ತಿಳಿಸಿದರು.

