ಕಣ್ಣೂರು: ಸಿಪಿಎಂ ಕಾರ್ಯಕರ್ತ ಕೆ.ಹರಿದಾಸ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಈ ನಾಲ್ವರು ಹರಿದಾಸ್ ಕೊಲೆ ಸಂಚಿನ ರೂವಾರಿಗಳೆಂದು ಪೊಲೀಸರು ತಿಳಿಸಿದ್ದಾರೆ.
0
samarasasudhi
ಫೆಬ್ರವರಿ 23, 2022
ಕಣ್ಣೂರು: ಸಿಪಿಎಂ ಕಾರ್ಯಕರ್ತ ಕೆ.ಹರಿದಾಸ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಈ ನಾಲ್ವರು ಹರಿದಾಸ್ ಕೊಲೆ ಸಂಚಿನ ರೂವಾರಿಗಳೆಂದು ಪೊಲೀಸರು ತಿಳಿಸಿದ್ದಾರೆ.
ವೃತ್ತಿಯಲ್ಲಿ ಮೀನುಗಾರರಾದ 54 ವರ್ಷ ವಯಸ್ಸಿನ ಹರಿದಾಸ್ ಅವರನ್ನು ತಲಶ್ಶೇರಿ ಸಮೀಪದ ಪುನ್ನೋಲ್ನಲ್ಲಿರುವ ಅವರ ಮನೆಯ ಹೊರಗೆ ಸೋಮವಾರ ಮಾರಕಾಯುಧಗಳಿಂದ ಕಡಿದು ಹತ್ಯೆಗೈಯಲಾಗಿತ್ತು.
ಹರಿದಾಸ್ ಅವರ ಕೊಲೆಗೆ ರಾಜಕೀಯ ದ್ವೇಷವೇ ಕಾರಣವೆಂದು ಈವರೆಗೆ ಕಲೆಹಾಕಲಾದ ಪುರಾವೆಗಳಿಂದ ತಿಳಿದುಬಂದಿದೆ. ಬಂಧಿತರೆಲ್ಲರೂ ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರೆಂದು ಪೊಲೀಸ್ ಆಯುಕ್ತ ಆರ್. ಇಳಂಗೊ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಯುತ್ತಿರುವುದಾಗಿ ಅವರು ಹೇಳಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಕೆ.ಲಿಜೇಶ್ ಬಿಜೆಪಿಯ ತಲಶ್ಶೇರಿ ಮಂಡಲದ ಅಧ್ಯಕ್ಷ ಹಾಗೂ ತಲಶ್ಶೇರಿ ನಗರಸಭೆಯ ಸದಸ್ಯನಾಗಿದ್ದಾನೆ. ಇತರ ಆರೋಪಿಗಳನ್ನು ಅಮಲ್ ಮನೋಹರ್, ವಿಮಿನ್ ಕೆ.ವಿ. ಹಾಗೂ ಸುರೇಶ್ ಬಾಬು ಎಂದು ಗುರುತಿಸಲಾಗಿದೆ.
ಹರಿದಾಸ್ ಹತ್ಯೆಯ ಕೆಲವೇತಾಸುಗಳ ಬಳಿಕ ಲಿಜೇಶ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಪ್ರಸಾರ ಮಾಡಿದ್ದು, ತಮ್ಮ ಸಂಘಟನೆಯ ಕಾರ್ಯಕರ್ತರ ಮೇಲೆ ದಾಳಿ ನಡೆಸಿದವರನ್ನು ಪಕ್ಷವು ಹೇಗೆ ಮಟ್ಟಹಾಕಿದೆ ಎಂಬುದನ್ನು ಸಿಪಿಎಂಗೆ ನೆನಪಿಸುವುದಾಗಿ ಹೇಳಿಕೊಂಡಿದ್ದಾನೆ. ಪುನ್ನೋಲ್ನಲ್ಲಿರುವ ದೇವಾಲಯದ ಉತ್ಸವವೊಂದರಲ್ಲಿ ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರ ಮೇಲೆ ನಡೆಯಿತೆನ್ನಲಾದ ದಾಳಿಯ ಘಟನೆಯ ವಿರುದ್ಧ ಪ್ರತಿಭಟನಾ ಸಭೆಯಲ್ಲಿ ಆತ ಮಾಡಿದ್ದ ಭಾಷಣ ವಿಡಿಯೋ ಇದೆನ್ನಲಾಗಿದೆ.
ಈ ಮಧ್ಯೆ ಬಿಜೆಪಿಯು ಹರಿದಾಸ್ ಹತ್ಯೆಯಲ್ಲಿ ತನ್ನ ಪಾತ್ರವಿರುವುದನ್ನು ತಳ್ಳಿಹಾಕಿದೆ. ಪ್ರಕರಣದಲ್ಲಿ ಬಿಜೆಪಿಯ ನಗರಸಭಾ ಸದಸ್ಯ ಕೆ.ಲಿಜೇಶ್ ನನ್ನು ಬಂಧಿಸಿರುವುದು ರಾಜಕೀಯ ಪ್ರತೀಕಾರದ ಕ್ರಮವೆಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಆರೋಪಿಸಿದ್ದಾರೆ.