ಬೆಂಗಳೂರು: ಕರ್ನಾಟಕದ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಪಾಠ ಹೇಳಿದ ಪಾಕಿಸ್ತಾನದ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣವನ್ನು ವಂಚಿತಗೊಳಿಸುವುದು ಮೂಲಭೂತ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ಈ ಮೂಲಭೂತ ಹಕ್ಕನ್ನು ನಿರಾಕರಿಸುವುದು ಮತ್ತು ಹಿಜಾಬ್ ಧರಿಸಿದ್ದಕ್ಕಾಗಿ ಅವರನ್ನು ಬೆದರಿಸುವುದು ಸಂಪೂರ್ಣವಾಗಿ ದಬ್ಬಾಳಿಕೆಯಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಅವರು ಹೇಳಿದ್ದರು.
ಪ್ರತಿಕ್ರಿಯಿಸಿದ ಓವೈಸಿ, ನಮ್ಮ ದೇಶದ ಹುಡುಗಿಯರು ಇಲ್ಲಿ ಓದುತ್ತಾರೆ ಮತ್ತು ಅವರ ಭದ್ರತೆಗೆ ನಾವು ಹೊಣೆಗಾರರಾಗಿರುತ್ತೇವೆ. ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ನಮ್ಮ ದೇಶಕ್ಕೆ ಪಾಠ ಮಾಡುವುದು ಬೇಡ ಎಂದು ಓವೈಸಿ ಖಾರವಾಗಿಯೇ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಮಹಿಳಾ ಶಿಕ್ಷಣ ಹೋರಾಟಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ ಮಲಾಲಾ ಯೂಸುಫ್ ಜಾಯ್ ಮೇಲೆ ದಾಳಿ ನಡೆದಿದ್ದು, ತಮ್ಮ ದೇಶದ ಹೆಣ್ಣುಮಕ್ಕಳಿಗೆ ಭದ್ರತೆ ನೀಡಲು ವಿಫಲರಾಗಿರುವ ನೀವು ಈಗ ಭಾರತಕ್ಕೆ ಪಾಠ ಹೇಳುವುದು ಬೇಡ ಎಂದು ಓವೈಸಿ ತಿರುಗೇಟು ನೀಡಿದ್ದಾರೆ.
ಮಂಗಳವಾರ ಉತ್ತರ ಪ್ರದೇಶದಲ್ಲಿ ಮಾತನಾಡಿದ್ದ ಓವೈಸಿ, ಸಹೋದರಿಯರೇ ನಿಮ್ಮ ಹಿಜಾಬ್ ಹೋರಾಟ ಯಶಸ್ವಿಯಾಗಲಿ ಎಂದು ಹೇಳಿದ್ದರು.

