ಮುಂಬೈ: ಮಹಾರಾಷ್ಟ್ರದ ಪರ್ಭಾನಿ ಪ್ರಕರಣದಲ್ಲಿ ಐಎಸ್ ಭಯೋತ್ಪಾದಕ ಎಂದು ಸಾಬೀತಾದ ಯುವಕನನ್ನು ಮುಂಬೈನ ವಿಶೇಷ ಎನ್ಐಎ ನ್ಯಾಯಾಲಯ ದೋಷಿ ಎಂದು ಘೋಷಿಸಿದೆ.
ಮೇ 26ರ ಗುರುವಾರ ಪ್ರಕರಣದ ತೀರ್ಪು ಬಂದಿತ್ತು. ಸಿರಿಯಾದಲ್ಲಿ ಐಎಸ್ ಉಗ್ರರು ಅಂತರ್ಜಾಲದ ಮೂಲಕ ಭಾರತೀಯ ಯುವಕರನ್ನು ಭಯಭೀತಗೊಳಿಸಲು ಸಂಚು ರೂಪಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಈ ತೀರ್ಪು ಬಂದಿದೆ. ಪ್ರಕರಣದಲ್ಲಿ ತಪ್ಪಿತಸ್ಥನಾಗಿರುವ ಮೊಹಮ್ಮದ್ ಶಾಹಿದ್ ಖಾನ್, ಸಿರಿಯಾದ ಐಎಸ್ ಭಯೋತ್ಪಾದಕರ ಸೂಚನೆ ಮೇರೆಗೆ ಭಾರತದಲ್ಲಿ ಐಇಡಿ ತಯಾರಿಸಿದ್ದ. ಆರೋಪಿ ಮೊಹಮ್ಮದ್ ಶಾಹಿದ್ ಖಾನ್‌ಗೆ ನ್ಯಾಯಾಲಯವು ಏಳು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 45,000 ರೂ.ದಂಡ ವಿಧಿಸಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಜುಲೈ 14, 2016 ರಂದು ಮುಂಬೈನ ಆ್ಯಂಟಿ ಟೆರರ್ ಸ್ಕ್ವಾಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಸೆಪ್ಟೆಂಬರ್ 14 ರಂದು ಎನ್ಐಎ ಕೈಗೆತ್ತಿಕೊಂಡಿತ್ತು. ಅಕ್ಟೋಬರ್ 7ರಂದು ತನಿಖೆ ಪೂರ್ಣಗೊಂಡು ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

