ನವದೆಹಲಿ: ಕೇಂದ್ರ ಸರ್ಕಾರದ 'ಅಗ್ನಿಪಥ' ಯೋಜನೆ ಅಡಿಯಲ್ಲಿ ಸೇನೆಗೆ ಸೇರುವ 'ಅಗ್ನಿವೀರ'ರಿಗೆ (10ನೇ ತರಗತಿ ಉತ್ತೀರ್ಣರಾದವರಿಗೆ) ಸೇವಾ ಅವಧಿಯಲ್ಲಿಯೇ ಶಿಕ್ಷಣವನ್ನು ಮುಂದುವರಿಸಿ 12ನೇ ತರಗತಿ ಪೂರ್ಣಗೊಳಿಸುವುದಕ್ಕೆ ಪೂರಕವಾಗಿ ವಿಶೇಷ ಕಾರ್ಯಕ್ರಮವನ್ನು 'ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಒಪನ್ ಸ್ಕೂಲಿಂಗ್' (ಎನ್ಐಒಎಸ್) ರೂಪಿಸಿದೆ.
ರಕ್ಷಣಾ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಎನ್ಐಒಎಸ್ ಈ ಕಾರ್ಯಕ್ರಮ ರೂಪಿಸಿದೆ ಎಂದು ಕೇಂದ್ರೀಯ ಶಿಕ್ಷಣ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 'ಅಗ್ನಿವೀರ' ಆಗಿ ಆಯ್ಕೆಯಾಗುವವರಿಗೆ ಸಶಸ್ತ್ರ ಪಡೆಗಳಲ್ಲಿ ನಾಲ್ಕು ವರ್ಷಗಳವರೆಗೆ ಸೇವೆ ಸಲ್ಲಿಸಲು ಅವಕಾಶ ದೊರೆಯಲಿದೆ.
ಎನ್ಐಒಎಸ್ನ ಈ ಕ್ರಮವವನ್ನು ಸ್ವಾಗತಿಸಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಈ ಯೋಜನೆಯು ಅಗ್ನಿಪಥ ಯೋಜನೆಗೆ ಸ್ಫೂರ್ತಿ ನೀಡುತ್ತದೆ. ಅಗ್ನವೀರರಿಗೆ ಕೌಶಲದ ಜತೆಗೆ ಜ್ಞಾನವೂ ದೊರೆಯುವುದಕ್ಕೆ ಪೂರಕವಾಗಿದೆ. ಈ ಮೂಲಕ ಅವರಿಗೆ ದೇಶದಾದ್ಯಂತ ಉದ್ಯೋಗಾವಕಾಶಗಳ ಜತೆಗೆ ಉನ್ನತ ಶಿಕ್ಷಣ ಮುಂದುವರಿಸಲೂ ಅವಕಾಶ ದೊರೆಯುತ್ತದೆ ಎಂದು ಹೇಳಿದ್ದಾರೆ.