ಕೊಲ್ಲಂ: ಕಡೈಕಲ್ ಎಂಬಲ್ಲಿ ಮನೆಯೊಂದರ ಮೇಲೆ ಪ್ರತಿನಿತ್ಯ ರಾತ್ರಿ ಕಲ್ಲೆಸೆಯುತ್ತಿರುವ ಬಗ್ಗೆ ವರದಿಯಾಗಿದೆ. ಮನೆ ಪರಿಸರದಲ್ಲಿ ಕಲ್ಲುಗಳು, ನಾಣ್ಯಗಳು ಮತ್ತು 500 ರೂಪಾಯಿ ನೋಟುಗಳು ಲಭಿಸಿದೆ.
ಎರಡೇ ದಿನಗಳಲ್ಲಿ 8,900 ರೂಪಾಯಿ ಕುಟುಂಬದವರ ಕೈ ಸೇರಿದೆ. ಸಿಕ್ಕಿದ ಹಣವನ್ನು ತಕ್ಷಣ ಪೋಲೀಸರಿಗೆ ಒಪ್ಪಿಸಿದರೂ ಕುಟುಂಬದವರ ಭಯ ಇನ್ನೂ ಕಡಿಮೆಯಾಗಿಲ್ಲ. ಕಡಯ್ಕಲ್ ಅನಪರ ನಿವಾಸಿ ರಾಜೇಶ್ ಎಂಬುವವರ ಮನೆಯಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಘಟನೆ ಇದು.
ಘಟನೆ ಬಳಿಕ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಇದರ ಹಿಂದೆ ಯಾರ ಕೈವಾಡವಿದೆ ಎಂಬ ಸುಳಿವು ಸಿಕ್ಕಿಲ್ಲ. ಜನಪ್ರತಿನಿಧಿಗಳು ಹಾಗೂ ಸ್ಥಳೀಯ ನಿವಾಸಿಗಳು ಮನೆಯಲ್ಲಿ ಕಾವಲು ನಿಂತಿದ್ದಾಗಲೇ ಮನೆಯ ಮೇಲಿದ್ದ ಕಲ್ನಾರಿನ ಹಾಳೆಯ ಮೇಲೆ ಕಲ್ಲುಗಳು ಬೀಳುತ್ತಿವೆ. ಆದರೆ ಆ ಪ್ರದೇಶದಲ್ಲಿ ಯಾರೂ ಪತ್ತೆಯಾಗಿಲ್ಲ.
ಮೂರು ತಿಂಗಳ ಹಿಂದೆ ರಾಜೇಶ್ ಕೆಲಸದ ನಿಮಿತ್ತ ವಿದೇಶಕ್ಕೆ ಹೋಗಿದ್ದರು. ಅವರ ಪತ್ನಿ ಪ್ರಸೀದಾ ಮತ್ತು ಮಕ್ಕಳು ಇಲ್ಲಿ ವಾಸವಾಗಿದ್ದಾರೆ. ಪ್ರಸೀದಾ ಅವರ ತಂದೆ ಪುಷ್ಕರನ್ ಮತ್ತು ತಾಯಿ ಅವರೊಂದಿಗೆ ಇದ್ದಾರೆ. ಈ ಕುರಿತು ಕಡೈಕಲ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಘಟನೆ ಮುಂದುವರಿದಿದೆ.


