ತಿರುವನಂತಪುರ: ತಾಯಿಯೊಬ್ಬಳು ತನ್ನ ನವಜಾತ ಶಿಶುವನ್ನು ಉಸಿರುಗಟ್ಟಿಸಿ ಕೊಂದು, ಬಳಿಕ ಅದನ್ನು ಮನೆ ಹತ್ತಿರದ ಸಮುದ್ರ ದಂಡೆಯ ಬಳಿ ಹೂತು ಹಾಕಿರುವ ಘಟನೆ ಕೇರಳದ ತಿರುವನಂತಪುರ ಜಿಲ್ಲೆಯ ಅಂಚುತೆಂಗು ಎಂಬಲ್ಲಿ ನಡೆದಿದೆ.
ಈ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದ್ದು, ಆರೋಪಿ ತಾಯಿ 42 ವರ್ಷದ ಜೂಲಿಯನ್ನು ಅಂಚುತೆಂಗು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ವಾರ ಜೂಲಿ ಮನೆ ಬಳಿಯ ಬೀಚ್‌ನಲ್ಲಿ ನಾಯಿಗಳು ಶಿಶುವಿನ ಕಳೆಬರವನ್ನು ಮೇಲೆಳೆದು ಕಿತ್ತಾಡಿದ್ದವು. ಇದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ತನಿಖೆ ಮಾಡಿ ಗರ್ಭಿಣಿಯಾಗಿದ್ದವರ ಮಾಹಿತಿ ತಿಳಿದಿದ್ದರು. ಜೂಲಿ ಮೇಲೆ ಅನುಮಾನ ಬಂದು ಅವರನ್ನು ವಶಕ್ಕೆ ಪಡೆದುಕೊಂಡ ನಂತರ ಅವರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜೂಲಿ ಗಂಡ 11 ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ತಾನು ಗರ್ಭಿಣಿಯಾಗಿರುವ ವಿಷಯವನ್ನು ಮನೆಯವರಿಂದ ಮುಚ್ಚಿಟ್ಟಿದ್ದರು. ಜುಲೈ 27 ರಂದು ಗುರುವಾರ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ವಿಧವೆಯಾಗಿರುವೆ ಜೂಲಿಗೆ ಈಗಾಗಲೇ 13 ವರ್ಷದ ಮಗಳೊಬ್ಬರಿದ್ದಾರೆ ಎಂದು ತಿಳಿದು ಬಂದಿದೆ.