ಕಾಸರಗೋಡು: ಕೇರಳಕ್ಕೆ ಮಂಜೂರಾದ ಎರಡನೇ ವಂದೇಭಾರತ್ ಎಕ್ಸ್‍ಪ್ರೆಸ್ ರೈಲು ಬುಧವಾರ ಕಾಸರಗೋಡಿನಿಂದ ಅಧಿಕೃತ ಸಂಚಾರ ಆರಂಭಿಸಿತು.
ಮಂಗಳವಾರ ತಡರಾತ್ರಿ ನಿಲ್ದಾಣಕ್ಕೆ ಆಗಮಿಸಿದ ರೈಲು, ಬುಧವಾರ ಬೆಳಗ್ಗೆ 7ಕ್ಕೆ ತಿರುವನಂತಪುರಕ್ಕೆ ಚೊಚ್ಚಲ ಪ್ರಯಾಣ ಆರಂಭಿಸಿದೆ. ರೈಲಿನಲ್ಲಿ ಚೇರ್ ಕಾರ್ ಕ್ಲಾಸ್‍ನಲ್ಲಿ 96ಸೀಟು ಹಾಗೂ ಎಕ್ಸಿಕ್ಯೂಟವ್ ಕ್ಲಾಸ್‍ನಲ್ಲಿ 11ಆಸನಗಳಿವೆ. ಮಧ್ಯಾಹ್ನ 3.05ಕ್ಕೆ ತಿರುವನಂತಪುರ ತಲುಪುವ ರೈಲು ಅಲ್ಲಿಂದ ಸಂಜೆ 4.05ಕ್ಕೆ ಕಾಸರಗೊಡಿಗೆ ಹೊರಡಲಿದೆ.
ಕಾಸರಗೋಡಿನಿಂದ ತಿರುವನಂತಪುರಂ ವಂದೇಭಾರತ್ ಎಕ್ಸ್‍ಪ್ರೆಸ್ ಕಾಸರಗೋಡು ರೈಲ್ವೆ ಪ್ಯಾಸೆಂಜರ್ ಅಸೋಸಿಯೇಶನ್ ನೇತೃತ್ವದಲ್ಲಿ ಲೋಕೋ ಪೈಲಟ್‍ಗಳನ್ನು ಶಾಲುಹೊದಿಸಿ ಗೌರವಿಸಲಾಯಿತು. ಮೊದಲ ಪ್ರಯಾಣದ ಎಲ್ಲ ಪ್ರಯಾಣಿಕರಿಗೆ ಸಿಹಿ ತಿನಿಸು ಹಂಚಲಾಯಿತು. ಟಿಕೆಟ್ ಪರಿಶೋಧಕರಾದ ಪ್ರದೀಪ್ ಕಾಞಂಗಾಡ್, ರಬೀಶ್ ಕೋಯಿಕ್ಕೋಡ್ ಮತ್ತು ಚಕ್ರವರ್ತಿ ಅವರಿಗೆ ಹೂಗುಚ್ಛ ನೀಡಿ ಬೀಳ್ಕೊಡಲಾಯಿತು.
ಕಾಸರಗೋಡು ರೈಲ್ವೆ ಪ್ಯಾಸೆಂಜರ್ ಅಸೋಸಿಯೇಶನ್ ಅಧ್ಯಕ್ಷ ಆರ್.ಪ್ರಶಾಂತ್ ಕುಮಾರ್, ಪದಾಧಿಕಾರಿಗಳಾದ ಡಾ.ಜಮಾಲ್ ಮುಹಮ್ಮದ್, ಸುಬ್ರಹ್ಮಣ್ಯ, ನಾಗರಾಜ್, ರಯೀಸ್ ನುಲ್ಳಿಪ್ಪಾಡಿ, ಬಶೀರ್ ಉಪಸ್ಥಿತರಿದ್ದರು.

