ಕುಂಬಳೆ: ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತಪದ್ಮನಾಭ ದೇವಸ್ಥಾನದ ದೇವರ ಮೊಸಳೆ 'ಬಬಿಯಾ'ಸಾವಿಗೀಡಾಗಿ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಅ. 9ರಂದು ದೇವಸ್ಥಾನದಲ್ಲಿ ವಿಶೇಷ ಕರ್ಯಕ್ರಮ ಆಯೋಜಿಸಲಾಗಿದೆ.
ದೇವಲಯದ ಪ್ರತ್ಯಕ್ಷ ದೈವ ಎಂದೇ ಪ್ರಸಿದ್ಧಿಪಡೆದಿರುವ ಬಬಿಯಾ ಹೆಸರಿನ ಮೊಸಳೆ 2022 ಅ. 9ರಂದು ವಯೋಸಹಜ ಅಸ್ವಖ್ಯದಿಂದ ತನ್ನ 82ನೇ ವಯಸ್ಸಿನಲ್ಲಿ ಮೃತಪಟ್ಟಿತ್ತು. ಅನಂತಪುರ ಸರೋವರ ದೇವಾಲಯಕ್ಕೆ ಶೋಭೆಯಂತಿದ್ದ ಬಬಿಯಾ ಮೊಸಳೆ ಅಗಲಿ ಒಂದು ವರ್ಷ ಸಮೀಪಿಸುತ್ತಿದ್ದು, ದೇವಾಲಯದ ಎರಡೂ ಕೆರೆಗಳಲ್ಲೂ ಶೂನ್ಯತೆ ಕಾಡುತ್ತಿದೆ.
ದೇವಸ್ಥಾನದ ಮುಖ್ಯ ಕೆರೆಯಲ್ಲಿ ಅಥವಾ ದಕ್ಷಿಣದ ಸಣ್ಣ ಕೆರೆಯಲ್ಲಿ ಹಗಲು ಹೊತ್ತಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಬಬಿಯಾ, ರಾತ್ರಿ ವೇಳೆಯಲ್ಲಿ ದೇಗುಲದೊಳಗೆ ಬಂದು ಮಲಗುತ್ತಿತ್ತು. ಅದೆಷ್ಟೋ ಮಂದಿ ಭಕ್ತಾದಿಗಳು ದೂರದೂರಿಂದ ದೇವಾಲಯದ ಪ್ರತ್ಯಕ್ಷದೈವ ಬಬಿಯಾ ದರ್ಶನಕ್ಕಾಗಿ ಆಗಮಿಸುತ್ತಿದ್ದರು. ಕೇರಳದ ರಾಜಧಾನಿ ತಿರುವನಂತಪುರ ಹಾಗೂ ಕುಂಬಳೆ ಸನಿಹದ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮಧ್ಯೆ ಸಂಪರ್ಕವಿದ್ದು, ಗುಹಾಮಾರ್ಗವಾಗಿ ಎರಡೂ ದೇಗುಲಗಳಿಗೆ ಸಂಪರ್ಕವಿರುವುದಾಗಿ ಐತಿಹ್ಯವಿದೆ.
ಪ್ರಥಮ ಸ್ಮರಣೆ:
ದೇವರ ಮೊಸಳೆ ಬಬಿಯಾ ಹರಿಪಾದ ಸೇರಿದ ಪ್ರಥಮ ವಾರ್ಷಿಕ ಕಾರ್ಯಕ್ರಮ ಅ. 9ರಂದು ದೇವಸ್ಥಾನದಲ್ಲಿ ವಇವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು. ಬಬಿಯಾ ಸಮಸ್ಮರಣಾ ಕಾರ್ಯಕ್ರಮ ಹಾಗೂ ಬಲಿವಾಡು ಕೂಟ ಆಯೋಜಿಸಲಾಗಿದೆ. ದೇವಸ್ಥಾನದ ಸಭಾಂಗಣದಲ್ಲಿ ಸಂಸ್ಮರಣಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.



