ಪೆರ್ಲ: ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸಂಘ ಪೆರ್ಲ ಘಟಕ ವತಿಯಿಂದ ಉಚಿತ ಉದ್ಯೋಗ ಮಾಹಿತಿ ಶಿಬಿರ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಗ್ರಂಥಾಲಯ ಸಭಾಂಗಣದಲ್ಲಿ ಜರುಗಿತು. ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶವಾಣಿಯಂತೆ ಶಿಕ್ಷಣದಿಂದ ಸ್ವತಂತ್ರ ಬದುಕು ಕಟ್ಟಿಕೊಳ್ಳುವುದ ಜತೆಗೆ ಸಂಘಟನೆಯ ಮೂಲಕ ಸಮಾಜದಲ್ಲಿ ಪ್ರಬಲ ಶಕ್ತಿಯಾಗಿ ರೂಪುಗೊಳ್ಳಲು ಪ್ರತಿಯೊಬ್ಬ ಪಣತೊಡಬೇಕು ಎಂದು ತಿಳಿಸಿದರು.
ಗಿಡದಲ್ಲಿ ಅರಳಿದ ಹೂವು ಪರಿಮಳ ಬೀರುವ ರೀತಿಯಲ್ಲಿ ನಾವು ಕೂಡ ಉತ್ತಮ ಕೆಲಸಗಳ ಮೂಲಕ ಪರೋಪಕಾರಿ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಬಿ. ಪಿ. ಶೇಣಿ ಅಧ್ಯಕ್ಷತೆ ವಹಿಸಿದ್ದರು. ಪೆರ್ಲ ಹೊಂಬೆಳಕು ಟ್ಯೂಷನ್ ಸೆಂಟರ್‍ನ ಪ್ರಾoಶುಪಾಲ ಡಾ.ಕಿಶೋರ್ ಕುಮಾರ್ ರೈ ಶೇಣಿ, ಪೆರ್ಲ ಶ್ರೀ ಸತ್ಯನಾರಾಯಣ ವಿದ್ಯಾರಣ್ಯ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸದಾಶಿವ ಭಟ್ ಹರಿನಿಲಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ರುಕ್ಮಿಣಿ ಬೆದ್ರಂಪಳ್ಳ, ಸಂಘದ ಗೌರವಾಧ್ಯಕ್ಷ ಸುನೀತ್ ಕುಮಾರ್ ಡಿ. ಉಪಸ್ಥಿತರಿದ್ದರು. ಪದ್ಮನಾಭ ಸುವರ್ಣ ಬಜಕೂಡ್ಲು ಸ್ವಾಗತಿಸಿದರು. ಉಮೇಶ್ ಕೆ.ಪೆರ್ಲ ಕಾರ್ಯಕ್ರಮ ನಿರೂಪಿಸಿದರು.ರಾಮಕುಮಾರ್ ಮುಂಡಿತಡ್ಕ ವಂದಿಸಿದರು.
ಉದ್ಯೋಗಾರ್ಥಿಗಳಿಗಾಗಿ ನಡೆದ ಶಿಬಿರದಲ್ಲಿ ಕೇರಳ ರಾಜ್ಯ ಲೋಕಸೇವಾ ಆಯೋಗ ನಿವೃತ್ತ ಅಂಡರ್ ಸೆಕ್ರೆಟರಿ ಗಣೇಶ್ ಪ್ರಸಾದ್ ಪಾಣೂರು ಅವರು ಪಿಎಸ್‍ಸಿ ಪರೀಕ್ಷೆ ಎದುರಿಸುವ ಬಗ್ಗೆ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಸಮಾರೋಪ ಸಮಾರಂಭದಲ್ಲಿ ಗಣೇಶ್ ಪ್ರಸಾದ್ ಪಾಣೂರು ಅವರನ್ನು ಪೆರ್ಲ ಚಿನ್ಮಯ ಕ್ಲಿನಿಕ್‍ನ ಡಾ. ಕೃಷ್ಣ ಮೋಹನ ಬಜಕೂಡ್ಲು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.


