ನವದೆಹಲಿ: 'ವಿಚಾರಣೆಗೆ ಯೋಗ್ಯವಾದ ಸಾವಿರಾರು ವಿಷಯಗಳು ಇರಬಹುದು. ಆದರೆ, ಸುಪ್ರೀಂ ಕೋರ್ಟ್ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಲು ಪ್ರತಿಯೊಂದು ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ' ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮಂಗಳವಾರ ಹೇಳಿದ್ದಾರೆ.
0
samarasasudhi
ಅಕ್ಟೋಬರ್ 11, 2023
ನವದೆಹಲಿ: 'ವಿಚಾರಣೆಗೆ ಯೋಗ್ಯವಾದ ಸಾವಿರಾರು ವಿಷಯಗಳು ಇರಬಹುದು. ಆದರೆ, ಸುಪ್ರೀಂ ಕೋರ್ಟ್ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಲು ಪ್ರತಿಯೊಂದು ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ' ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮಂಗಳವಾರ ಹೇಳಿದ್ದಾರೆ.
ಕೇರಳದಲ್ಲಿ ಸೆರೆಸಿಕ್ಕ ಆನೆಗಳ ಸಾವುಗಳಿಗೆ ಸಂಬಂಧಿಸಿದ ವಿಚಾರಣೆ ಸಂದರ್ಭದಲ್ಲಿ ಸಲ್ಲಿಸಲಾಗಿದ್ದ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿದ ನಂತರ ಅವರು ಈ ಮಾತು ಹೇಳಿದರು.
'ಇವು ಸ್ಥಳೀಯ ಸಮಸ್ಯೆಗಳಾಗಿದ್ದು, ಹೈಕೋರ್ಟ್‌ಗಳು ಇವುಗಳನ್ನು ಇತ್ಯರ್ಥಪಡಿಸಬಹುದು. ಹೈಕೋರ್ಟ್‌ಗಳಿಂದ ಘೋರ ಪ್ರಮಾದವಾಗಿದ್ದು ಕಂಡುಬಂದಲ್ಲಿ, ಅಂತಹ ತಪ್ಪುಗಳನ್ನು ಸರಿಪಡಿಸಲು ನಾವಿದ್ದೇವೆ. ಇಂತಹ ಪ್ರವೃತ್ತಿ ಇದ್ದರೆ ದೇಶವನ್ನು ಮುನ್ನಡೆಸುವುದು ಹೇಗೆ' ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಇದ್ದ ನ್ಯಾಯಪೀಠ ಪ್ರಶ್ನಿಸಿತು.
ಮಧ್ಯಂತರ ಅರ್ಜಿ ಸಲ್ಲಿಸಿದ್ದ ಅರ್ಜಿದಾರರೊಬ್ಬರ ಪರ ಹಾಜರಿದ್ದ ಹಿರಿಯ ವಕೀಲ ಸಿ.ಯು.ಸಿಂಗ್,'ಸೆರೆಸಿಕ್ಕ ಆನೆಗಳ ಸಾವು ಗಂಭೀರವಾದ ವಿಚಾರ. ಇಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿರುವ ಕಾರಣ ತುರ್ತು ವಿಚಾರಣೆ ಅಗತ್ಯ' ಎಂದು ನ್ಯಾಯಪೀಠಕ್ಕೆ ತಿಳಿಸಿದರು.
'ನಿರ್ಲಕ್ಷ್ಯ, ಅತಿಯಾದ ಕಾರ್ಯಭಾರದಿಂದಾಗಿ 2019ರ ಫೆಬ್ರುವರಿಯಿಂದ 2022ರ ನವೆಂಬರ್‌ವರೆಗಿನ ಅವಧಿಯಲ್ಲಿ 135 ಆನೆಗಳು ಮೃತಪಟ್ಟಿವೆ' ಎಂದೂ ವಕೀಲ ಸಿಂಗ್ ಹೇಳಿದರು.
'ಈ ವಿಚಾರವಾಗಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ. ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಸ್ಥಳೀಯ ಪರಿಸ್ಥಿತಿಯ ಅರಿವಿದ್ದು, ಅವರು ಪರಿಹಾರ ಒದಗಿಸಬಲ್ಲರು' ಎಂದು ಸಿಂಗ್ ಅವರಿಗೆ ಸೂಚಿಸಿದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದ ಮೂಲ ಅರ್ಜಿಯನ್ನು ಡಿಸೆಂಬರ್ ವಿಚಾರಣಾ ಪಟ್ಟಿಗೆ ಸೇರಿಸಿ ಆದೇಶಿಸಿತು.