ಮುಂಬೈ: ಸಂಸತ್ತಿನ ಹೊರಗಡೆ ಹಳದಿ ಬಣ್ಣದ ಹೊಗೆ ಸಿಂಪಡಿಸಿ, ಪ್ರತಿಭಟಿಸುವ ಮೂಲಕ ಭದ್ರತಾ ಸಿಬ್ಬಂದಿಯಿಂದ ಬಂಧನಕ್ಕೀಡಾಗಿರುವ ಅಮೋಲ್ ಶಿಂದೆ, ದೆಹಲಿಯಲ್ಲಿ ಸೇನಾ ನೇಮಕಾತಿ ಶಿಬಿರದಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆ ಎಂದು ಮನೆಯಲ್ಲಿ ಹೇಳಿದ್ದನೆಂದು ತಿಳಿದುಬಂದಿದೆ.
0
samarasasudhi
ಡಿಸೆಂಬರ್ 14, 2023
ಮುಂಬೈ: ಸಂಸತ್ತಿನ ಹೊರಗಡೆ ಹಳದಿ ಬಣ್ಣದ ಹೊಗೆ ಸಿಂಪಡಿಸಿ, ಪ್ರತಿಭಟಿಸುವ ಮೂಲಕ ಭದ್ರತಾ ಸಿಬ್ಬಂದಿಯಿಂದ ಬಂಧನಕ್ಕೀಡಾಗಿರುವ ಅಮೋಲ್ ಶಿಂದೆ, ದೆಹಲಿಯಲ್ಲಿ ಸೇನಾ ನೇಮಕಾತಿ ಶಿಬಿರದಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆ ಎಂದು ಮನೆಯಲ್ಲಿ ಹೇಳಿದ್ದನೆಂದು ತಿಳಿದುಬಂದಿದೆ.
25 ವರ್ಷದ ಅಮೋಲ್ ಶಿಂದೆ, ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಝರಿ ಎಂಬ ಹಳ್ಳಿಯ ನಿವಾಸಿಯಾಗಿದ್ದಾನೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಸಂಸತ್ತಿನ ಹೊರಗಡೆ ಗ್ಯಾಸ್ ಕ್ಯಾನ್‌ಗಳಿಂದ ಹಳದಿ ಬಣ್ಣ ಹೊಗೆ ಸಿಂಪಡಿಸಿ, 'ಸರ್ವಾಧಿಕಾರ ನಡೆಯಲ್ಲ' ಎಂಬ ಘೋಷಣೆ ಕೂಗಿದ ಆರೋಪದ ಮೇಲೆ ಶಿಂದೆ ಮತ್ತು 42 ವರ್ಷದ ಹರಿಯಾಣದ ಹಿಸಾರ್ ಮೂಲದ ನೀಲಂ ಎಂಬುವವರನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿತ್ತು. ಇದೇವೇಳೆ, ಭಾರತ್ ಮಾತಾ ಕಿ ಜೈ, ಜೈ ಭೀಮ್, ಜೈ ಭಾರತ್ ಎಂಬುದಾಗಿಯೂ ಅವರು ಘೋಷಣೆ ಕೂಗಿದ್ದಾರೆ.
ಇದೇ ಸಂದರ್ಭ ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಇಬ್ಬರು ಯುವಕರು ಲೋಕಸಭೆಯ ಚೇಂಬರ್‌ಗೆ ಧುಮುಕಿದ್ದಾರೆ. ಅವರೂ ಸಹ ಹಳದಿ ಹೊಗೆ ಸಿಂಪಡಿಸಿ ಸ್ಪೀಕರ್ ಪೀಠದೆಡೆಗೆ ನುಗ್ಗಲೆತ್ನಿಸಿದ್ದರು. ಇಬ್ಬರನ್ನೂ ಥಳಿಸಿದ ಸಂಸದರು ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದರು.
ಪರಿಶಿಷ್ಟ ಪಂಗಡಕ್ಕೆ ಸೇರಿದ ಶಿಂದೆ ಬಿ.ಎ ಪದವೀಧರ. ದಿನಗೂಲಿ ನೌಕರನಾಗಿ, ಪೊಲೀಸ್ ಮತ್ತು ಸೇನಾ ನೇಮಕಾತಿಯಲ್ಲಿ ಭಾಗವಹಿಸಲು ಕಠಿಣ ಪರಿಶ್ರಮಪಟ್ಟಿದ್ದ. ಶಿಂದೆ ಪೋಷಕರು ಮತ್ತು ಇಬ್ಬರು ಸಹೋದರರು ಸಹ ದಿನಗೂಲಿ ನೌಕರರಾಗಿದ್ದಾರೆ. ಡಿಸೆಂಬರ್ 9ರಂದು ಮನೆ ಬಿಟ್ಟಿದ್ದ ಅಮೋಲ್ ಶಿಂದೆ, ದೆಹಲಿಯಲ್ಲಿ ಸೇನಾ ನೇಮಕಾತಿ ನಡೆಯುತ್ತಿದ್ದು, ಅಲ್ಲಿಗೆ ತೆರಳುತ್ತಿದ್ದೇನೆ ಎಂದು ಮನೆಯಲ್ಲಿ ಹೇಳಿದ್ದ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಹಿಂದೆಯೂ ಮಗ ಹಲವು ಬಾರಿ ತೆರಳಿದ್ದರಿಂದ ಪೋಷಕರಿಗೆ ಅವನ ಬಗ್ಗೆ ಯಾವುದೇ ಅನುಮಾನ ಬಂದಿರಲಿಲ್ಲ. ಶಿಂದೆ ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡಿರಲಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ.