HEALTH TIPS

ಕೇರಳದಲ್ಲಿ ರಸ್ತೆ ಸೇರಿದಂತೆ ಮೂಲಸೌಯರ್ಕ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ವಿನಿಯೋಗ: ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ

                    ಕಾಸರಗೋಡು: ಕೇಂದ್ರ ಸರ್ಕಾರ ಕೇರಳದಲ್ಲಿ ರಸ್ತೆ ಸೇರಿದಂತೆ ವಿವಿಧ ಮೂಲಸೌಕರ್ಯ ಅಭಿವೃದ್ಧಿಗಾಗಿ 1ಲಕ್ಷ ಕೋಟಿ ರೂ. ವಿನಿಯೋಗಿಸುತ್ತಿರುವುದಾಗಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. 

               ಅವರು ಭಾರತ್ ಪರ್ಯಾಯ ಯೋಜನೆಯನ್ವಯ ರಾಜ್ಯದಲ್ಲಿ 1464ಕೋಟಿ ರೂ. ಮೊತ್ತದ ನಿರ್ಮಾಣಕಾಮಗಾರಿ ಆರಂಭಗೊಳ್ಳುವ ಹಾಗೂ ಕಾಮಗಾರಿ ಪೂರ್ಣಗೊಳ್ಳುತ್ತಿರುವ 12 ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಆನ್‍ಲೈನ್ ಮೂಲಕ ನಿನ್ನೆ(ಶುಕ್ರವಾರ) ಆನ್ ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು. 

                  ರಸ್ತೆಗಳು ಅಭಿವೃದ್ಧಿಯ ನರನಾಡಿಗಳಾಗಿದ್ದು, ಕೇರಳದಲ್ಲಿ ನಡೆಯುತ್ತಿರುವ ರಸ್ತೆಅಭಿವೃದ್ಧಿ ಕಾಮಗಾರಿಗಳು ರಾಜ್ಯದ ಪ್ರವಾಸೋದ್ಯಮ ವಲಯವನ್ನು ಉನ್ನತ ಸ್ಥಾನಕ್ಕೇರಿಸಲಿದೆ. ಕೇರಳದಲ್ಲಿ ಭೂಮಿಯ ಬೆಲೆ ದುಬಾರಿಯಾಗಿರುವುದರಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಹೆಚ್ಚಿನ ಹೂಡಿಕೆಮಾಡಬೇಕಾಗಿ ಬಂದಿದೆ. ಇದರಿಂದ ಒಂದು ಕಿ.ಮೀ ರಸ್ತೆ ನಿರ್ಮಾಣಕ್ಕೆ ಸುಮಾರು 50ಕೋಟಿ ಖರ್ಚು ತಗಲುತ್ತಿದೆ. ದೇಶಾದ್ಯಂತ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ರಾಷ್ಟ್ರಮಟ್ಟದಲ್ಲಿ ಅಭಿವೃದ್ಧಿಗೆ ಹೊಸ ಮುನ್ನುಡಿ ಬರೆದಿರುವುದಾಗಿ ತಿಳಿಸಿದರು.


                ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಮುರಳೀಧರನ್ ಆನ್‍ಲೈನ್ ಮೂಲಕ ಪಾಲ್ಗೊಂಡು ಮಾತನಾಡಿ, ಮೂಲಸೌಕರ್ಯ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಎಲ್ಲ ರಾಜ್ಯಗಳಿಗೂ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವ ಮೂಲಕ ಮಹತ್ವದ ಹೆಜ್ಜೆಯಿರಿಸಿದ್ದಾರೆ. ಹೆಚ್ಚಿನ ಜನಸಾಂದ್ರತೆ ಹಾಗೂ ದುಬಾರಿ ಬೆಲೆ ಹೊಂದಿರುವ ಭೂಮಿಯಿಂದ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಜತೆಗೆ ನಿರ್ಮಾಣ ಸಾಮಗ್ರಿ ಲಭ್ಯತೆಯ ಕೊರತೆಯೂ ಸಮಸ್ಯೆಯಾಗಿದೆ. ಆದರೆ ಕೇರಳದಲ್ಲಿ ಈ ಸಂದಿಗ್ಧಾವಸ್ಥೆ ಮೆಟ್ಟಿನಿಂತು   ಮಹತ್ವದ ಅಭಿವೃದ್ಧಿಗೆ ಹಾದಿಮಾಡಿಕೊಡಲಾಗಿದೆ ಎಂದು ತಿಳಿಸಿದರು.


           ಕೇರಳದಲ್ಲಿ ಮಹತ್ವದ ಯೋಜನೆಗಳಿಗೆ ಭೂಮಿ ಒದಗಿಸಿಕೊಡುವ ಮೂಲಕ ಕೇರಳ ಸರ್ಕಾರ ದೇಶದಲ್ಲೇ ಮಾದರಿಯಾಗಿದೆ ಎಂದು ಆನ್‍ಲೈನ್ ಮೂಲಕ ಪಾಲ್ಗೊಂಡ ಕೇರಳ ರಾಜ್ಯ ಲೋಕೋಪಯೋಗಿ-ಪ್ರವಾಸೋದ್ಯಮ ಖಾತೆ ಸಚಿವ ಪಿ.ಎ.ಮಹಮ್ಮದ್ ರಿಯಾಜ್ ತಿಳಿಸಿದ್ದಾರೆ. ಷಟ್ಪಥ ನಿರ್ಮಾಣಕ್ಕಾಗಿ ಕೇವಲ ಭೂಮಿ ವಶಪಡಿಸಿಕೊಳ್ಳಲು 5600ಕೋಟಿ ರೂ. ವಿನಿಯೋಗಿಸಲಾಗಿದೆ.  ತಲಪ್ಪಾಡಿ-ಚೆರ್ಕಳ ಷಟ್ಪಥ ಕಾಮಗಾರಿ 2024 ಡಿಸೆಂಬರ್ ವೇಳೆಗೆ ಪೂರ್ತಿಗೊಳ್ಳಲಿದೆ. ವಿವಿಧ ಇಲಾಖೆಗಳನ್ನು ಸಂಯೋಜಿಸಿಕೊಂಡು ಕೇರಳದಲ್ಲಿ ರಸ್ತೆಕಾಮಗಾರಿ ಪೂರ್ತಿಗೊಳಿಸಲಾಗುವುದು ಎಂದು ತಿಳಿಸಿದರು. 

           ತಾಳಿಪಡ್ಪು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಸಮಾರಂಭದಲ್ಲಿ ದೀಪ ಬೆಳಗಿಸಿ, ಸ್ವಾಗತಿಸಿದರು. ಶಾಸಕರಾದ ಎಂ. ರಾಜಗೋಪಾಲನ್, ಎನ್.ಎ ನೆಲ್ಲಿಕುನ್ನು, ಎ.ಕೆ.ಎಂ ಅಶ್ರಫ್, ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್, ಮಾಜಿ ಸಂಸದ ಪಿ. ಕರುಣಾಕರನ್, ಮಾಜಿ ಸಚಿವ ಸಿ.ಟಿ ಅಹಮ್ಮದಾಲಿ,  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬಾರದ ಕೇಂದ್ರ, ರಾಜ್ಯ ಸಚಿವರು:

           ಕಾಸರಗೋಡು ತಾಳಿಪಡ್ಪು ಮೈದಾನದಲ್ಲಿ ವಿಶೇಷವಾಗಿ ಸಜ್ಜುಗೊಳಿಸಲಾದ ವೇದಿಕೆಯಲ್ಲಿ ಕಾರ್ಯಕ್ರಮ ನಿಗದಿಯಾಗಿದ್ದರೂ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಡಾ.ವಿ.ಕೆ.ಸಿಂಗ್, ವಿ.ಮುರಳೀಧರನ್, ಕೇರಳ ಲೋಕೋಪಯೋಗಿ ಖಾತೆ ಸಚಿವ ಪಿ.ಎ.ಮಹಮ್ಮದ್ ರಿಯಾಜ್ ನೇರವಾಗಿ ಪಾಲ್ಗೊಂಡಿರಲಿಲ್ಲ. ವಿ.ಕೆ ಸಿಂಗ್ ಹೊರತುಪಡಿಸಿ ಉಳಿದ ಸಚಿವರು ಆನ್‍ಲೈನ್‍ಮೂಲಕ ಮಾತನಾಡಿದರು. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಹಾಗೂ ವಿ.ಮುರಳೀಧರನ್ ಅವರು ದೆಹಲಿಯಿಂದ ಹೊರಟಿದ್ದ ವಿಮಾನದಲ್ಲಿ ಕಾಣಿಸಿಕೊಂಡ ತಕರಾರಿನಿಂದ ಮೇಲಕ್ಕೇರಿದ ಅಲ್ಪ ಹೊತ್ತಿನಲ್ಲಿ ದೆಹಲಿಯ ನಿಲ್ದಾಣಕ್ಕೆ ವಾಪಸಾಗಬೇಕಾಗಿತ್ತು. ಕೇರಳದ ಸಚಿವ ಮಹಮ್ಮದ್ ರಿಯಾಸ್ ಕಣ್ಣೂರಿನಿಂದ ಆನ್‍ಲೈನ್ ಮೂಲಕ ಸಭೆಯಲ್ಲಿ ಪಾಲ್ಗೊಂಡರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries