ಕಣ್ಣೂರು: ಎಡಿಎಂ ನವೀನ್ ಬಾಬು ಸಾವಿನ ಹಿನ್ನೆಲೆಯಲ್ಲಿ ಬಂಧಿತಳಾದ ಪಿಪಿ ದಿವ್ಯಾ ಅವರನ್ನು ಪೋಲೀಸರು ವಿಚಾರಣೆ ನಡೆಸಿ ಮತ್ತೆ ಜೈಲಿಗೆ ಕರೆದೊಯ್ದರು. ತನಿಖಾ ತಂಡವು ದಿವ್ಯಾ ಅವರನ್ನು ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ವಿಚಾರಣೆ ನಡೆಸಿತು.
ವಿಚಾರಣೆ ಬಳಿಕ ದಿವ್ಯಾಳನ್ನು ಕಣ್ಣೂರು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಮಹಿಳಾ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಕಣ್ಣೂರು ಜ್ಯುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಶುಕ್ರವಾರ ಸಂಜೆಯವರೆಗೂ ದಿವ್ಯಾ ಅವರನ್ನು ಕಸ್ಟಡಿಗೆ ಒಪ್ಪಿಸಿದೆ.
ಬಂಧನದ ದಿನ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದರೂ ದಿವ್ಯಾ ಸಹಕರಿಸಿರಲಿಲ್ಲ. ನಂತರ, ಕಾರ್ಯವಿಧಾನದ ಭಾಗವಾಗಿ, ಪೋಲೀಸರು ಕಸ್ಟಡಿಯಲ್ಲಿ ವಿಚಾರಣೆಯ ಅಗತ್ಯವನ್ನು ತೋರಿಸುವ ಅರ್ಜಿಯನ್ನು ಸಲ್ಲಿಸಿದ್ದರು.
ಪೋಲೀಸರು ಎರಡು ದಿನಗಳ ಕಸ್ಟಡಿಗೆ ಅರ್ಜಿ ಸಲ್ಲಿಸಿದರು. ಆದರೆ ಒಂದು ದಿನದ ಕಸ್ಟಡಿ ನೀಡಲಾಗಿತ್ತು.
ಬಂಧಿಸಿದ ದಿನವೇ ವಿಚಾರಣೆ ನಡೆಸಿದ್ದರಿಂದ ಇನ್ನಷ್ಟ್ಟು ಕಾಲಾವಕಾಶ ಬೇಕೇ ಎಂದು ನ್ಯಾಯಾಲಯ ಕೇಳಿದೆ. ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ ನಂತರ ದಿವ್ಯಾ ತನಿಖಾ ತಂಡದ ಮುಂದೆ ಶರಣಾಗಿದ್ದರು. ದಿವ್ಯಾ ಪಲ್ಲಿಕುನ್ನು ಅವರನ್ನು 14 ದಿನಗಳ ಕಾಲ ಮಹಿಳಾ ಜೈಲಿನಲ್ಲಿ ಇರಿಸಲಾಗಿತ್ತು. ದಿವ್ಯಾ ಪರವಾಗಿ ವಕೀಲ ಕೆ.ವಿಶ್ವನ್ ಅವರು ಪ್ರಿನ್ಸಿಪಲ್ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.


