ನವದೆಹಲಿ: 'ವಿಶ್ವ ಬಾಲ ದಿನ'ದ ಅಂಗವಾಗಿ ವಿವಿಧ ರಾಜ್ಯಗಳ 17 ಮಕ್ಕಳಿಗೆ 'ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ'ವನ್ನು ಪ್ರದಾನ ಮಾಡಲಾಯಿತು.
ದೆಹಲಿಯ ಭಾರತ ಮಂಟಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 3 ಕೇಂದ್ರಾಡಳಿತ ಪ್ರದೇಶಗಳು, 14 ರಾಜ್ಯಗಳ 10 ಬಾಲಕಿಯರು ಹಾಗೂ ಏಳು ಬಾಲಕರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ ದ್ರೌಪದಿ ಮುರ್ಮು ಅವರು, 'ಅಸಾಧಾರಣ ಧೈರ್ಯ ಮತ್ತು ಕಲೆ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸಲಾಗಿದೆ' ಎಂದು ಹೇಳಿದ್ದಾರೆ.
'ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವಲ್ಲಿ ಬಾಲ ಪುರಸ್ಕಾರ ಸ್ವೀಕರಿಸಿರುವ ಯುವ ಸಾಧಕರ ಪಾತ್ರ ಮಹತ್ವದ್ದಾಗಿರುತ್ತದೆ' ಎಂದು ಮುರ್ಮು ಅವರು ಅಭಿನಂದಿಸಿದ್ದಾರೆ.
ಕಲೆ, ಸಂಸ್ಕೃತಿ, ಶೌರ್ಯ, ನಾವಿನ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ಸೇವೆ, ಕ್ರೀಡೆ ಹಾಗೂ ಪರಿಸರ ಎಂಬ ಏಳು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಪದಕ, ಪ್ರಮಾಣಪತ್ರ ಹಾಗೂ ಹೊತ್ತಗೆಯೊಂದನ್ನು ಪ್ರಶಸ್ತಿಯು ಒಳಗೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ತಿಳಿಸಿದೆ.


