ನವದೆಹಲಿ: ಬಿಜೆಪಿ ಜೊತೆ ಸೇರಿಕೊಂಡು ದೆಹಲಿ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷದ ಹೆಸರು ಹಾಳು ಮಾಡಲು ಕಾಂಗ್ರೆಸ್ ಕುತಂತ್ರ ಮಾಡುತ್ತಿದೆ ಎಂದು ಎಎಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್‌ನ ಕೃತ್ಯಗಳು ಇಂಡಿಯಾ ಬಣದ ಒಗ್ಗಟ್ಟಿಗೆ ಹಾನಿ ಮಾಡುತ್ತಿವೆ ಎಂದು ದೆಹಲಿ ಮುಖ್ಯಮಂತ್ರಿ ಆತಿಶಿ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ದೂರಿದ್ದಾರೆ.
'ಹರಿಯಾಣ ಚುನಾವಣೆ ಸಂದರ್ಭ ಕಾಂಗ್ರೆಸ್ ಕುರಿತಂತೆ ನಾವು ಒಂದೇ ಒಂದು ಪದ ಬಳಕೆ ಮಾಡಿಲ್ಲ. ಆದರೆ, ದೆಹಲಿ ಕಾಂಗ್ರೆಸ್ ಬಿಜೆಪಿಯ ಸ್ಕ್ರಿಪ್ಟ್ ಅನ್ನು ಓದುತ್ತಿರುವಂತೆ ಕಾಣುತ್ತಿದೆ. ಅವರ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಕಚೇರಿಯಲ್ಲಿ ಅಂತಿಮಗೊಳಿಸಿದಂತೆ ಕಾಣುತ್ತಿದೆ'ಎಂದು ಸಿಂಗ್ ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕರಾದ ಅಜಯ್ ಮಾಕೇನ್, ಸಂದೀಪ್ ದೀಕ್ಷಿತ್, ಬಿಜೆಪಿ ಬಗ್ಗೆ ಗಮನ ಕೇಂದ್ರೀಕರಿಸುವುದನ್ನು ಬಿಟ್ಟು ಎಎಪಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಅರವಿಂದ ಕೇಜ್ರಿವಾಲ್ ಅವರನ್ನು ದೇಶ ವಿರೋಧಿ ಎಂದು ಕರೆಯುವ ಮೂಲಕ ಅಜಯ್ ಮಾಕೇನ್ ಎಲ್ಲ ಮಿತಿಗಳನ್ನು ಮೀರಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ ಹೊರತಾಗಿಯೂ ಕೇಜ್ರಿವಾಲ್ ಈಗ ಎಫ್‌ಐಆರ್ ಎದುರಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಯಾವುದೇ ಬಿಜೆಪಿ ನಾಯಕರ ವಿರುದ್ಧ ಒಂದೇ ಒಂದು ಎಫ್‌ಐಆರ್ ದಾಖಲಿಸಿಲ್ಲ ಎಂದು ಸಿಂಗ್ ಹೇಳಿದ್ದಾರೆ.
ಆತಿಶಿ ಇದೇ ರೀತಿಯ ಆರೋಪ ಮಾಡಿದ್ದು, ಕಾಂಗ್ರೆಸ್ ಸಕ್ರಿಯವಾಗಿ ಎಎಪಿಯನ್ನು ದುರ್ಬಲಗೊಳಿಸುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.
'ಕಾಂಗ್ರೆಸ್ ಅಭ್ಯರ್ಥಿಗಳಾದ ಸಂದೀಪ್ ದೀಕ್ಷಿತ್ ಮತ್ತು ಫರ್ಹಾದ್ ಸೂರಿಯಂತವರು ಬಜೆಪಿ ಬೆಂಬಲ ಪಡೆಯುತ್ತಿರುವುದು ಸ್ಪಷ್ಟವಾಗಿದೆ. ಈ ಕುತಂತ್ರವು 'ಇಂಡಿಯಾ' ಒಕ್ಕೂಟದ ಬಗ್ಗೆ ಕಾಂಗ್ರೆಸ್ ಬದ್ಧತೆಯನ್ನು ಪ್ರಶ್ನೆಗೀಡುಮಾಡಿದೆ'ಎಂದು ಆತಿಶಿ ಹೇಳಿದ್ದಾರೆ.
24 ಗಂಟೆಗಳೊಳಗಾಗಿ ಅಜಯ್ ಮಾಕೇನ್, ಇತರೆ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿರುವ ಎಎಪಿ, ಇಲ್ಲವಾದರೆ ಇಂಡಿಯಾ ಒಕ್ಕೂಟದಿಂದ ಕಾಂಗ್ರೆಸ್ ವಿಸರ್ಜನೆಗೆ ಒತ್ತಾಯಿಸಲಾಗುವುದು ಎಂದು ಹೇಳಿದೆ..
ಕಾಂಗ್ರೆಸ್ ಪಕ್ಷವನ್ನು 'ಇಂಡಿಯಾ' ಒಕ್ಕೂಟದಿಂದ ಹೊರಹಾಕುವಂತೆ ಇತರೆ ಮಿತ್ರಪಕ್ಷಗಳಿಗೆ ಮನವಿ ಮಾಡುವುದಾಗಿ ಸಿಂಗ್ ಹೇಳಿದ್ದಾರೆ.

