ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ದೆಹಲಿಯ ನಿಗಮ್‌ಬೋಧ್ ಘಾಟ್‌ನಲ್ಲಿ ಶನಿವಾರ ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಆ ಮೂಲಕ ಭಾರತದ ಅರ್ಥ ವ್ಯವಸ್ಥೆಗೆ ಹೊಸ ಆಯಾಮ ನೀ
ಡಿದ್ದ ನೇತಾರನ ಸುದೀರ್ಘ ಅಧ್ಯಾಯವೊಂದು ಕೊನೆಗೊಂಡಿತು.
ಮಧ್ಯಾಹ್ನ 1 ಗಂಟೆ ಹೊತ್ತಿಗೆ ಸಿಖ್ ಧರ್ಮ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು.

ಮೊದಲಿಗೆ ಮೂರನೇ ಮೋತಿಲಾಲ್ ಮಾರ್ಗದಲ್ಲಿರುವ ಮನಮೋಹನ್ ಸಿಂಗ್ ಅವರ ನಿವಾಸಿದಿಂದ ಅವರ ಪಾರ್ಥೀವ ಶರೀರವನ್ನು ಬಿಗಿ ಭದ್ರತೆಯೊಂದಿಗೆ ಎಐಸಿಸಿ ಕಚೇರಿಗೆ ತರಲಾಯಿತು. ಕಾಂಗ್ರೆಸ್ ಮುಖಂಡರು ಅಂತಿಮ ದರ್ಶನ ಪಡೆದ ನಂತರ ಅಲ್ಲಿಂದ ನಿಗಮ್‌ಬೋಧ್‌ಗೆ ಪಾರ್ಥಿವ ಶರೀರವನ್ನು ತರಲಾಯಿತು. ಅಲ್ಲಿ ಅಂತಿಮ ವಿಧಾನಗಳು ನಡೆದವು.
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ದೆಹಲಿ ಮುಖ್ಯಮಂತ್ರಿ ಅತಿಶಿ, ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ, ಡಿಎಂಡಿಕೆ ಮುಖ್ಯಸ್ಥ ವಿಜಯಕಾಂತ್, ಸಮಾಜವಾದಿ ಪಕ್ಷದ ಸಂಸದ ಅವದೇಶ್ ಪ್ರಸಾದ್, ಭೂತಾನ್ ದೊರೆ ಜಿಗ್ಮ್ ಖೇಸರ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.



