ನವದೆಹಲಿ: ನೀಟ್ -ಪಿಜಿ 2024ರ ಅಖಿಲ ಭಾರತ ಕೋಟಾದ (ಎಐಕ್ಯೂ) ಮೂರನೇ ಸುತ್ತಿನ ಸೀಟುಗಳಿಗೆ ನಡೆಸಿರುವ ಕೌನ್ಸೆಲಿಂಗ್ ರದ್ದುಪಡಿಸಿ, ಹೊಸದಾಗಿ ಕೌನ್ಸೆಲಿಂಗ್ ನಡೆಸಲು ನಿರ್ದೇಶನ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿನೋದ್ ಚಂದ್ರನ್ ಅವರ ಪೀಠವು ಅರ್ಜಿ ತಿರಸ್ಕರಿಸಿತು. ಅರ್ಜಿದಾರರ ಮನವಿಯನ್ನು ಪುರಸ್ಕರಿಸಿ ಅಂತಹ ಯಾವುದೇ ನಿರ್ದೇಶನ ನೀಡಿದರೆ, ಎಲ್ಲ ರಾಜ್ಯಗಳಲ್ಲಿ ತೀವ್ರ ಸ್ವರೂಪದ ಪರಿಣಾಮವನ್ನು ಬೀರುತ್ತದೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಪರ ವಕೀಲರು ಮಾಡಿದ ವಾದವನ್ನು ಪೀಠವು ಪುರಸ್ಕರಿಸಿತು.
ಹೊಸದಾಗಿ ಕೌನ್ಸೆಲಿಂಗ್ ನಡೆಸಲು ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ದಾಖಲಿಸುವಂತೆ ಕೇಂದ್ರ ಸರ್ಕಾರ ಮತ್ತು ಎನ್‌ಎಂಸಿಗೆ ಸುಪ್ರೀಂ ಕೋರ್ಟ್ ಫೆ. 4ರಂದು ಸೂಚನೆ ನೀಡಿತ್ತು.
ನೀಟ್ ಪಿಜಿ 2024ರ ಎಐಕ್ಯೂ ಮೂರನೇ ಸುತ್ತಿನ ಕೌನ್ಸೆಲಿಂಗ್‌ಗೆ ಅರ್ಹರಾಗಿದ್ದ ಅರ್ಜಿದಾರರು, ಕೆಲವು ರಾಜ್ಯಗಳಲ್ಲಿ ಎರಡನೇ ಸುತ್ತಿನ ಕೌನ್ಸೆಲಿಂಗ್ ಮುಗಿಯುವ ಮೊದಲೇ ಮೂರನೇ ಸುತ್ತಿನ ಕೌನ್ಸೆಲಿಂಗ್ ಆರಂಭವಾಗಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಅರ್ಜಿದಾರರ ಪರ ವಕೀಲರಾದ ತಾನ್ವಿ ದುಬೆ, ಎಐಕ್ಯೂ ಮತ್ತು ರಾಜ್ಯ ಕೋಟಾ ಸೀಟುಗಳ ಕೌನ್ಸೆಲಿಂಗ್ ದಿನಾಂಕದ ಗೊಂದಲದಿಂದ ಅರ್ಜಿದಾರರಿಗೆ ಅನ್ಯಾಯವಾಗಿದೆ. ರಾಜ್ಯ ಕೋಟಾದ ಅನೇಕ ವಿದ್ಯಾರ್ಥಿಗಳು, 3ನೇ ಸುತ್ತಿನಲ್ಲಿ ಅಖಿಲ ಭಾರತ ಕೋಟಾ ಸೀಟು ಬ್ಲಾಕ್ ಮಾಡಲು ಆಸ್ಪದವಾಗಿದೆ ಎಂದು ವಾದಿಸಿದ್ದರು.



