ಮುಂಬೈ: ನಗರದ 64 ವರ್ಷದ ಮಹಿಳೆಯೊಬ್ಬರಲ್ಲಿ ನರ ಸಂಬಂಧಿ ಕಾಯಿಲೆ 'ಗಿಲ್ಲೈನ್ ಬರ್ರೆ ಸಿಂಡ್ರೋಮ್' (ಜಿಬಿಎಸ್) ಪತ್ತೆಯಾಗಿದೆ. ಇದು ಮುಂಬೈನಲ್ಲಿ ವರದಿಯಾದ ಮೊದಲ ಪ್ರಕರಣ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಜಿಬಿಎಸ್ ಪ್ರಕರಣವನ್ನು ಖಚಿತಪಡಿಸಿರುವ ಬೃಹತ್ ಮಂಬೈ ಮಹಾನಗರ ಪಾಲಿಕೆ (ಬಿಎಂಸಿ) ಆಯುಕ್ತರು, ರೋಗಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರೋಗಿಯು ಪೂರ್ವ ಅಂಧೇರಿಯವರಾಗಿದ್ದು, ಮೊದಲು ಅವರಿಗೆ ಜ್ವರ ಹಾಗೂ ಬೇಧಿಯಾಗಿತ್ತು. ನಂತರ ಪಾರ್ಶವಾಯು ಆಗಿ, ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ರೋಗಿಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಜಿಬಿಎಸ್ ಕಾಯಿಲೆ ತೀವ್ರ ಹಂತಕ್ಕೆ ತಲುಪಿದಾಗ ಪಾರ್ಶವಾಯು ಆಗುತ್ತದೆ.
ಜಿಬಿಎಸ್ ಎಂಬುದು, ರೋಗಿಯ ಪ್ರತಿಕಾಯ ಸಾಮರ್ಥ್ಯವನ್ನು ಕುಗ್ಗಿಸುವ ಬ್ಯಾಕ್ಟೀರಿಯಾ ಹಾಗೂ ವೈರಲ್ ಸೋಂಕಿನಿಂದ ಬರುವ ನರ ಸಂಬಂಧಿ ಅನಾರೋಗ್ಯವಾಗಿದೆ. ಇದು ಅಪರೂಪದ ಕಾಯಿಲೆಯಾಗಿದ್ದು, ದೇಹವು ಹಠಾತ್ತನೆ ಮರಗಟ್ಟುವಂತೆ ಮಾಡಿ, ಕೈ-ಕಾಲು ಹಾಗೂ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ.
ಮಹಾರಾಷ್ಟ್ರದ ಪುಣೆಯಲ್ಲಿ ಶಂಕಿತ ಜಿಬಿಎಸ್‌ನಿಂದ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ಪ್ರಕರಣಗಳ ಸಂಖ್ಕೆಯ 173ಕ್ಕೆ ತಲುಪಿದೆ.



