ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ 142 ನೇ ಜನ್ಮ ದಿನಾಚರಣೆಯನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಮಾ.23 ರಂದು ಮಂಜೇಶ್ವರದ ಕವಿಮನೆ ಗಿಳಿವಿಂಡಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ.
ಬುಧವಾರ ಮಂಜೇಶ್ವರದ ಗಿಳಿವಿಂಡಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಖೆ ರಚಿಸಲಾಯಿತು. ಸಮಾರಂಭದ ಸ್ವಾಗತಿ ಸಮಿತಿ ಅಧ್ಯಕ್ಷರಾಗಿ ಕಾಸರಗೋಡು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಪ್ರಧಾನ ಕಾರ್ಯದರ್ಶಿಯಾಗಿ ಗಿಳಿವಿಂಡು ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು, ಖಜಾಂಜಿಯಾಗಿ ಬಾಲಕೃಷ್ಣ ಶೆಟ್ಟಿಗಾರ್ ಹಾಗೂ ವಿವಿಧ ಉಪ ಸಮಿತಿಗಳಿಗೆ ಜವಾಬ್ದಾರರನ್ನು ಆಯ್ಕೆ ಮಾಡಲಾಯಿತು.
ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ, ಸಭಾ ಕಾರ್ಯಕ್ರಮ, ಬಹುಭಾಷಾ ಕವಿಗೋಷ್ಠಿ ಮೊದಲಾದ ಕಾರ್ಯಕ್ರಮಗಳನ್ನು ಮಾ.23 ರಂದು ಬೆಳಿಗ್ಗೆ 9..30 ರಿಂದ ಗಿಳಿವಿಂಡಲ್ಲಿ ಆಯೋಜಿಸಲಾಗಿಒದೆ. ಈ ಸಂದರ್ಭ ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಮಹಾಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗ್ರಂಥಾಲಯಕ್ಕೆ ಗಿಳಿವಿಂಡು ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಂಥಾಲಯ-ವಾಚನಾಲಯ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಾಗುವುದು. ಎರಡೂ ರಾಜ್ಯಗಳ ವಿವಿಧ ವಲಯಗಳ ಗಣ್ಯರು, ಕವಿ, ಸಾಹಿತಿಗಳು ಪಾಲ್ಗೊಳ್ಳಲಿರುವ ಸಮಾರಂಭದಲ್ಲಿ ಈರ್ವರು ಸಾಹಿತ್ಯ ಸಾಧಕರಿಗೆ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸಭೆಯಲ್ಲಿ ಗಿಳಿವಿಂಡು ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಾಲಕೃಷ್ಣ ಮಾಸ್ತರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ರೂಪುರೇಖೆ ನೀಡಿದರು. ಪ್ರಮುಖರಾದ ಕಮಲಾಕ್ಷ ಡಿ., ಕಮಲಾಕ್ಷ ಕನಿಲ, ಆಶಾ ದಿಲೀಪ್ ಸುಳ್ಯಮೆ, ವನಿತಾ ಆರ್.ಶೆಟ್ಟಿ, ಉಮೇಶ್ ಕೆ.ಮಂಜೇಶ್ವರ, ಈಶ್ವರ ಮಾಸ್ತರ್ ಮೊದಲಾದವರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಕಮಲಾಕ್ಷ ಡಿ.ವಂದಿಸಿದರು.




