ಕಾಸರಗೋಡು: ಕೇರಳದಲ್ಲಿ ಆಮೂಲಾಗ್ರ ಬದಲಾವಣೆ ತರಲು ಹಾಗೂ ರಾಜ್ಯವನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡುವ ನಿಟ್ಟಿನಲ್ಲಿ ರಾಜಕೀಯ ಮೀರಿ ಹೊಸ ರಂಗ ರಚನೆಯಾಗಬೇಕು ಎಂದು ಎನ್‍ಸಿಪಿ(ಅಜಿತ್ ಪವಾರ್ ಬಣ) ರಾಜ್ಯಾಧ್ಯಕ್ಷ ಎನ್.ಎ.ಮುಹಮ್ಮದ್ ಕುಟ್ಟಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಬೆಳವಣಿಗೆಯಾಗಲು ಸಾಮೂಹಿಕ ರಂಗದ ಪ್ರಗತಿ ಅತ್ಯಗತ್ಯ. ರಾಜಕೀಯ ಸ್ಪಷ್ಟೀಕರಣ ನೀಡುವ ನಿಟ್ಟಿನಲ್ಲಿ ಎನ್‍ಸಿಪಿ ವತಿಯಿಂದ ಫೆಬ್ರವರಿ 11 ರಂದು ಕಾಸರಗೋಡಿನಿಂದ ತಿರುವನಂತಪುರ ವರೆಗೆ ಯಾತ್ರೆ ನಡೆಯಲಿದೆ. ಕೇರಳದಲ್ಲಿ ಹೊಸ ರಾಜಕೀಯ ಒಕ್ಕೂಟ ರಚಿಸುವ ನಿಟ್ಟಿನಲ್ಲಿ ಯಾತ್ರೆಯ ಮೂಲಕ ಪ್ರವಾಸ ಆಯೋಜಿಸಲಾಗುವುದು. ಯಾತ್ರೆಯು ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಸಂಚರಿಸಿ 17ರಂದು ಸಂಜೆ ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದೆ. ಯಾತ್ರೆಯ ಮಧ್ಯೆ ಪಕ್ಷದ ರಾಜ್ಯಾಧ್ಯಕ್ಷ ಎನ್.ಎ.ಮುಹಮ್ಮದ್ ಕುಟ್ಟಿ ಅವರು ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕøತಿಕ ಕ್ಷೇತ್ರದ ಪ್ರಮುಖರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. 11 ರಂದು ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳು, 12 ರಂದು ಕೋಯಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳು, 13 ರಂದು ಮಲಪ್ಪುರಂ ಮತ್ತು ಪಾಲಕ್ಕಾಡ್ ಜಿಲ್ಲೆಗಳು, 14 ರಂದು ತ್ರಿಶೂರ್ ಮತ್ತು ಎರ್ನಾಕುಲಂ ಜಿಲ್ಲೆಗಳು, 15 ರಂದು ಕೊಟ್ಟಾಯಂ ಮತ್ತು ಅಲಪ್ಪುಳ ಜಿಲ್ಲೆಗಳು, 17 ರಂದು ಇಡುಕ್ಕಿ ಮತ್ತು ಪತ್ತನಂತಿಟ್ಟ ಜಿಲ್ಲೆಗಳ ಮೂಲಕ ಸಆಘುವ ಯಾತ್ರೆಯು ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಗಳಲ್ಲಿ ಪ್ರವಾಸ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎನ್‍ಸಿಪಿ ರಾಜ್ಯ ಉಪಾಧ್ಯಕ್ಷ ಕೆ.ಎ.ಜಬ್ಬಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲರ ಮೋಹನದಾಸ್, ನ್ಯಾಶನಲಿಸ್ಟ್ ಲಾಯರ್ಸ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಹಾಗೂ ಯಾತ್ರೆಯ ಸಂಯೋಜಕ ಶಾಜಿ ತೆಂಗುಂಪಿಳ್ಳಿಲ್, ಕೆ.ಕೆ ಶಂಸುದ್ದೀನ್ ಉಪಸ್ಥಿತರಿದ್ದರು.

