ಕಾಸರಗೋಡು: ಭಾಷಾ ಅಲ್ಪಸಂಖ್ಯಾತ ಪ್ರದೇಶವಾಗಿರುವ ಕಾಸರಗೋಡಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕನ್ನಡಿಗರಿಂದ ಕನ್ನಡದಲ್ಲಿ ಅರ್ಜಿಗಳನ್ನು ಸ್ವೀಕರಿಸಲು ಹಾಗೂ ಕನ್ನಡದಲ್ಲಿ ಉತ್ತರ ಲಭ್ಯವಾಗಿಸುವುದರ ಜತೆಗೆ ಕಡತಗಳ ನಿರ್ವಹಣೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಸಹಾಯಕ ಜಿಲ್ಲಾಧಿಕಾರಿ ಪಿ.ಎನ್.ವಿಜಯನ್ ತಿಳಿಸಿದ್ದಾರೆ.
ಅವರು ಜಿಲ್ಲಾ ಮಟ್ಟದ ಅಧಿಕೃತ ಭಾಷಾ ಸಮಿತಿ ಸಭೆಯಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದರು.
ಭಾಷಾ ಅಲ್ಪಸಂಖ್ಯಾತರ ಪ್ರದೇಶ ಹೊರತುಪಡಿಸಿ ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಅಧಿಕೃತ ಭಾಷೆಯಾದ ಮಲಯಾಳ ಭಾಷೆಯಲ್ಲಿ ಕಡತಗಳ ನಿರ್ವಹಣೆಗೆ ಕ್ರಮಕೈಗೊಂಡಿರುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು. ಜಿಲ್ಲಾಧಿಕಾರಿಗಳ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದರು. ಅಧಿಕೃತ ಆಡಳಿತ ಭಾಷಾ ಇಲಾಖೆಯ ಭಾಷಾಶಾಸ್ತ್ರಜ್ಞ ಡಾ.ಆರ್.ಶಿವಕುಮಾರ್ ಉಪಸ್ಥಿತರಿದ್ದರು. ಈ ಸಂದರ್ಭ ವಿವಿಧ ಇಲಾಖೆಗಳ ಅಧಿಕೃತ ಭಾಷಾ ಪ್ರಗತಿ ಮಾಹಿತಿಯನ್ನು ಪರಿಶೀಲಿಸಲಾಯಿತು. ಭಾಷಾ ಅಲ್ಪಸಂಖ್ಯಾತರ ಪ್ರದೇಶದಲ್ಲಿ ಸಂವಿಧಾನವು ಖಾತ್ರಿಪಡಿಸಿರುವ ಹಕ್ಕುಗಳನ್ನು ಸಂರಕ್ಷಿಸಬೇಕು. ಕಡತಗಳಲ್ಲಿ ಕರಾರುವಾಕ್ಕಾದ ಹಾಗೂ ಸರಳ ಪದಗಳನ್ನು ಬಳಸುವಂತೆ ಎಚ್ಚರಿಕೆ ವಹಿಸಬೇಕು ಎಂದೂ ಸೂಚಿಸಲಾಯಿತು. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕನ್ನಡಿಗರಲ್ಲಿ ಸಂತೋಷ:
ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡಿನ ವಿವಿಧ ಇಲಾಖೆಗಳಲ್ಲಿ ಕನ್ನಡದಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ತಿರಸ್ಕರಿಸುವ ಹಾಗೂ ಉತ್ತರಗಳನ್ನು ಮಲಯಾಳದಲ್ಲಿ ನೀಡುವ ಕ್ರಮದಿಂದ ಕನ್ನಡಿಗರು ಹೆಚ್ಚಿನ ಸಮಸ್ಯೆ ಎದುರಿಸುತ್ತಿರುವುದನ್ನು ಮನಗಂಡು ಕನ್ನಡಪರ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಭಾಷಾ ಅಲ್ಪಸಂಖ್ಯಾತ ಪ್ರದೇಶಕ್ಕಿರುವ ಸಂವಿಧಾನಾತ್ಮಕ ಸವಲತ್ತುಗಳ ಹಿನ್ನೆಲೆಯಲ್ಲಿ ಸರ್ಕಾರ ಈ ಆದೇಶ ನೀಡಿದೆ. ಭಾಷಾ ಅಲ್ಪಸಂಖ್ಯಾತರಿಗಿರುವ ವಿಶೇಷ ಸವಲತ್ತುಗಳನ್ನು ಕಸಿದುಕೊಳ್ಳುವ ಕೆಲವು ಸರ್ಕಾರಿ ಉದ್ಯೋಗಿಗಳ ಧೋರಣೆಯಿಂದ ಕಾಸರಗೋಡಿನಲ್ಲಿ ಕನ್ನಡ ಭಾಷಿಗರು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರದ ಆದೇಶದಿಂದ ಗಡಿನಾಡ ಕನ್ನಡಿಗರಲ್ಲಿ ಸಂತೋಷ ಮನೆ ಮಾಡಿದೆ.

