ಕಾಸರಗೋಡು: ಡಿಜಿಟಲ್ ಸರ್ವೆ ಚಟುವಟಿಕೆಗಳಿಗಾಗಿ ಕಾಸರಗೋಡು ಜಿಲ್ಲಾಧಿಕಾರಿ ಕೆ. ಇನ್ಭಾಶೇಖರ್ ಅವರಿಗೆ ಅತ್ಯುತ್ತಮ ಜಿಲ್ಲಾಧಿಕಾರಿ ರಾಜ್ಯ ಪ್ರಶಸ್ತಿ ಒಲಿದುಬಂದಿದೆ. ಜಿಲ್ಲೆಯಲ್ಲಿ ಡಿಜಿಟಲ್ ಸರ್ವೆ ಚಟುವಟಿಕೆಗಳನ್ನು ಅತ್ಯುತ್ತಮ ರೀತಿಯಲ್ಲಿ ಸಂಘಟಿಸಿದ್ದಕ್ಕಾಗಿ ಈ ಪ್ರಶಸ್ತಿ ಆಯ್ಕೆಮಾಡಲಾಗಿದೆ ಎಂದು ಕಂದಾಯ ಸರ್ವೆ ಮತ್ತು ಭೂ ವ್ಯವಹಾರ ಸಚಿವ ಕೆ. ರಾಜನ್ ತಿಳಿಸಿದ್ದಾರೆ.
ಡಿಜಿಟಲ್ ಸಮೀಕ್ಷೆ ಚಟುವಟಿಕೆಗಳನ್ನು ಉತ್ತಮವಾಗಿ ಸಂಘಟಿಸಲು ಜಿಲ್ಲಾಧಿಕಾರಿಗಳು ಗ್ರಾಮ ಮಟ್ಟದಲ್ಲಿ ವಿಶೇಷ ಅದಾಲತ್‍ಗಳನ್ನು ಆಯೋಜಿಸಿದ್ದರು. ರಾಜ್ಯದಲ್ಲಿ ಮೊದಲ ಬಾರಿಗೆ ಡಿಜಿಟಲ್ ಸಮೀಕ್ಷೆಯನ್ನು ಪೂರ್ಣಗೊಳಿಸಿದ ಕುಂಬಳೆಯ ಉಜಾರ್-ಉಳುವಾರ್ ಗ್ರಾಮ ಮತ್ತು ತಳಂಗರೆ ಸೇರಿದಂತೆ ಗ್ರಾಮಗಳಿಗೆ ಜಿಲ್ಲಾಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಅದಾಲತ್‍ಗಳನ್ನು ನಡೆಸಿದ್ದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ನವೀನ ವಿಚಾರಗಳನ್ನು ಪರಿಚಯಿಸಿದ ಅತ್ಯುತ್ತಮ ಜಿಲ್ಲಾಧಿಕಾರಿಗಾಗಿ ಕೆ. ಇನ್ಭಾಶೇಖರ್ ಅವರು ಮುಖ್ಯ ಚುನಾವಣಾಧಿಕಾರಿಗಳ ಪ್ರಶಸ್ತಿಗೆ ಭಾಜನರಾಗಿದ್ದರು. ಜಿಲ್ಲಾಧಿಕಾರಿ ನೇತೃತ್ವದ ಐಲೀಡ್ ಯೋಜನೆಯು ಈ ವರ್ಷದ ಸಾಮಾಜಿಕ ನ್ಯಾಯ ಇಲಾಖೆ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದೆ.

.jpg)

