ನವದೆಹಲಿ: ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕದಿದ್ದಾಗ, ಈ ಕುರಿತು ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡದಿರುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಅಲ್ಲದೇ, ಇಂತಹ ನಡೆ ಮೂಲಕ 'ಬಿಕ್ಕಟ್ಟು' ಸೃಷ್ಟಿಯಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇದಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದೂ ಅಚ್ಚರಿ ವ್ಯಕ್ತಪಡಿಸಿದೆ.
ತಮಿಳುನಾಡು ವಿಧಾನಸಭೆಯ ಅಂಗೀಕಾರ ಪಡೆದಿರುವ ಮಸೂದೆಗಳಿಗೆ ಅಂಕಿತ ಹಾಕದೆ ಇರುವ ರಾಜ್ಯಪಾಲ ಆರ್.ಎನ್. ರವಿ ಅವರ ನಡೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ವೇಳೆ ಈ ಮಾತು ಹೇಳಿದೆ.
ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಆರ್.ಮಹಾದೇವನ್ ಅವರು ಇದ್ದ ನ್ಯಾಯಪೀಠ ಈ ಕುರಿತ ಅರ್ಜಿಯ ವಿಚಾರಣೆಯನ್ನು ಮುಂದುವರಿಸಿತು.
'ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿರುವ ಮಸೂದೆಗಳು ಕೇಂದ್ರೀಯ ಕಾಯ್ದೆಗಳಿಗೆ ವಿರುದ್ಧವಾಗಿವೆ ಎಂದು ಗ್ರಹಿಸಿ, ಅದರ ಆಧಾರದ ಮೇಲೆ ಅವುಗಳಿಗೆ ರಾಜ್ಯಪಾಲ ಆರ್.ಎನ್.ರವಿ ಅವರು ಅಂಕಿತ ಹಾಕದೇ ಇರುವುದು ಸರಿಯಲ್ಲ' ಎಂದು ನ್ಯಾಯಪೀಠ ಹೇಳಿತು.
'ಕೇಂದ್ರವು ಕಾಯ್ದೆಗೆ ತಂದಿರುವ ಬದಲಾವಣೆಗಳು ಅಥವಾ ತಿದ್ದುಪಡಿಗಳಿಗೆ ಮಸೂದೆಗಳು ವ್ಯತಿರಿಕ್ತವಾಗಿವೆ ಎಂದು ರಾಜ್ಯಪಾಲರು ಭಾವಿಸಿದಲ್ಲಿ, ಈ ಕುರಿತು ಅವರು ರಾಜ್ಯ ಸರ್ಕಾರದ ಗಮನ ಸೆಳೆಯಬೇಕಲ್ಲವೇ? ರಾಜ್ಯಪಾಲರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ರಾಜ್ಯ ಸರ್ಕಾರ ಅರಿಯಬೇಕು ಎಂದು ನಿರೀಕ್ಷೆ ಮಾಡುವುದಾದರೂ ಹೇಗೆ' ಎಂದು ರಾಜ್ಯಪಾಲ ರವಿ ಪರ ಹಾಜರಿದ್ದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರನ್ನು ನ್ಯಾಯಪೀಠ ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ವೆಂಕಟರಮಣಿ, 'ತಮಿಳುನಾಡು ಸಲ್ಲಿಸಿರುವ ಮಸೂದೆಗಳ ಪೈಕಿ 7 ಮಸೂದೆಗಳಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿಲ್ಲ. ತಮ್ಮ ಈ ನಿರ್ಧಾರ ಕುರಿತು ಅವರು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ' ಎಂದು ನ್ಯಾಯಪೀಠಕ್ಕೆ ತಿಳಿಸಿದರು.
'ಅಂಕಿತ ಹಾಕುವುದನ್ನು ತಡೆದಿದ್ದಾರೆ ಎಂದರೆ, ರಾಷ್ಟ್ರಪತಿಗಳು ಮಸೂದೆಗಳಿಗೆ ಅಂಕಿತ ಹಾಕುವುದನ್ನು ನಿರಾಕರಿಸಿದ್ದಾರೆ ಹಾಗೂ ಇವು ಸ್ವೀಕಾರಾರ್ಹವಲ್ಲ ಎಂದೇ ಅರ್ಥ' ಎಂದೂ ಹೇಳಿದರು.
'ಸಂವಿಧಾನದ 200 ಹಾಗೂ 201ನೇ ವಿಧಿಯ ಅವಕಾಶಗಳಡಿ ಈ ವಾದವನ್ನು ಒಪ್ಪಬಹುದಾದರೂ, ಅವಕಾಶಗಳ ಈ ರೀತಿಯ ವ್ಯಾಖ್ಯಾನ ಸರಿ ಅನಿಸುವುದಿಲ್ಲ' ಎಂದು ಪೀಠ ಅಭಿಪ್ರಾಯಪಟ್ಟಿತು.
ಆಗ, 'ಈ ವಿಚಾರವಾಗಿ ವಿಸ್ತೃತವಾಗಿ ಫೆ.10ರಂದು ವಾದ ಮಂಡಿಸುವೆ. ಅವಕಾಶ ನೀಡಬೇಕು' ಎಂದು ವೆಂಕಟರಮಣಿ ಕೋರಿದರು.
ಇದಕ್ಕೆ ಒಪ್ಪಿದ ನ್ಯಾಯಪೀಠ, ಫೆ.10ಕ್ಕೆ ವಿಚಾರಣೆಯನ್ನು ಮುಂದೂಡಿತು.



