ಕಾಸರಗೋಡು: ಜಮ್ಮು ಕಾಶ್ಮೀರ ಪಹಲ್ಗಾಮ್‍ನಲ್ಲಿ ನಡೆದ ಭಯೋತ್ಪಾದನಾ ಕೃತ್ಯದಲ್ಲಿ ಹತರಾದವರ ಪೈಕಿ ಕೇರಳದ ಎರ್ನಾಕುಳಂ ಇಡಪಳ್ಳಿ ನಿವಾಸಿ ರಾಮಚಂದ್ರನ್(65)ಒಳಗೊಂಡಿದ್ದಾರೆ. ಸೋಮವಾರ ಬೆಳಗ್ಗೆ ಕುಟುಂಬದವರೊಂದಿಗೆ ಪಹಲ್ಗಾಮ್ ತಲುಪಿದ್ದ ರಾಮಚಂದ್ರನ್, ಕುಟುಂಬ ಸದಸ್ಯರ ಕಣ್ಮುಂದೆ ಭಯೋತ್ಪಾದಕರ ಗುಂಡೇಟಿಗೆ ಬಲಿಯಾಗಿದ್ದಾರೆ. ರಾಮಚಂದ್ರನ್ ಅವರ ಪತ್ನಿ ಶೀಲಾರಾಮಚಂದ್ರನ್, ಪುತ್ರಿ ಆರತಿ ಹಾಗೂ ಆರತಿ ಅವರ ಅವಳಿ ಮಕ್ಕಳು ಸುರಕ್ಷಿತವಾಗಿದ್ದು, ಭದ್ರತಾಪಡೆ ಇವರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದೆ.
ಮಲೆನಾಡಿನ ಪ್ರವಾಸಿಗರು ಸುರಕ್ಷಿತ:
ಕಾಸರಗೋಡು ಜಿಲ್ಲೆಯ ಕಾಞಂಗಾಡು ಆಸುಪಾಸಿನಿಂದ ಜಮ್ಮುಕಾಶ್ಮೀರದ ಪಹಲ್ಗಾಮ್ ಪ್ರದೇಶಕ್ಕೆ ಪ್ರವಾಸ ತೆರಳಿರುವ 22ಮಂದಿ ಸದಸ್ಯರ ತಂಡ ಸುರಕ್ಷಿತವಾಗಿರುವುದಾಗಿ ಮಾಹಿತಿಯಿದೆ. ಭಯೋತ್ಪಾದನಾ ದಾಳಿ ನಡೆದಿರುವ ಪಹಲ್ಗಾಮ್‍ನಿಂದ 12ಕಿ.ಮೀ ದೂರದಲ್ಲಿ ಈ ತಂಡ ಬೀಡುಬಿಟ್ಟಿತ್ತು. ದಾಳಿ ಮಾಹಿತಿ ಲಭಿಸುತ್ತಿದ್ದಂತೆ ಭದ್ರತಾ ಸಿಬ್ಬಂದಿ ಇವರನ್ನು ಸುರಕ್ಷಿತ ತಾಣಕ್ಕೆ ಕರೆದೊಯ್ದಿದ್ದು, ನಂತರ ಜಮ್ಮುವಿಗೆ ಕಳುಹಿಸಿಕೊಟ್ಟಿದ್ದಾರೆ. ಕೋಡೋಂಬೇಳೂರು, ಪನತ್ತಡಿ, ಕಳ್ಳಾರ್, ಕುತ್ತಿಕ್ಕೋಲ್, ಬೇಡಡ್ಕ ಪಂಚಾಯಿತಿ ವ್ಯಾಪ್ತಿಯಿಂದ ತೆರಳಿದ್ದ ಈ ಪ್ರವಾಸಿಗಳ ತಂಡ ಚುಳ್ಳಿಕೆರೆಯ ಟ್ರಾವೆಲ್ ಏಜನ್ಸಿ ಮೂಲಕ ಪ್ರವಾಸ ಆಯೋಜಿಸಿತ್ತು.
ಕೊಂಡೆವೂರು ಶ್ರೀ ಖಂಡನೆ:
ಜಮ್ಮು-ಕಾಶ್ಮೀರದ ಪಹಲ್ಗಾಮ್ ಪ್ರವಾಸಿ ತಾಣದಲ್ಲಿ ಅಮಾಯಕ ಹಿಂದೂ ಪ್ರವಾಸಿಗರನ್ನು ಗುರಿಯಾಗಿಸಿ ಭಯೋತ್ಪಾದಕರು ನಡೆಸಿರುವ ದಾಳಿ ಮಾನವೀಯ ಹಾಗೂ ಅತ್ಯಂತ ಖಂಡನೀಯ ಎಂದು ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ. ಭಯೋತ್ಪಾದಕರ ದಾಳಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಅವರ ಕುಟುಂಬದವರಿಗೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮ ಅನುಗ್ರಹಿಸಲಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ, ಇಂತಹ ಹೇಯ ಕೃತ್ಯ ಮುಂದೆ ಆಗದಿರಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥಿಸಿದರು.

