ಕಾಸರಗೋಡು: ಷಟ್ಪಥವಾಗಿ ಅಭಿವೃದ್ಧಿಗೊಂಡಿರುವ ತಲಪ್ಪಾಡಿಯಿಂದ ಚೆಂಗಳವರೆಗಿನ ಮೊದಲ ರೀಚ್‍ನ 39 ಕಿ.ಮೀ ಉದ್ದದ ರಸ್ತೆ ಕಾಂಗಾರಿ ಬಹುತೇಕ ಪೂರ್ಣಗೊಂಡಿದ್ದು, ರಸ್ತೆ ವಹನಸಂಚಾರಕ್ಕೆ ತೆರೆದುಕೊಡುವ ಮೂಲಕ ರಾಜ್ಯಕ್ಕೆ ಇದು ಹೆಮ್ಮೆಯ ಕ್ಷಣವಾಗಲಿದೆ ಎಂದು ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಸಚಿವ ಪಿ.ಎ. ಮುಹಮ್ಮದ್ ರಿಯಾಜ್ ಹೇಳಿದರು.
ರಸ್ತೆ ಕಾಮಗಾರಿ ಅವಲೋಕನ ನಡೆಸುವ ನಿಟ್ಟಿನಲ್ಲಿ ಚೆಂಗಳ, ಕಾಸರಗೋಡು, ಉಪ್ಪಳ ಹಾಗೂ ತಲಪ್ಪಾಡಿ ವರೆಗೆ ಭೇಟಿ ನೀಡ ಅವಲೋಕನ ನಡೆಸಿದ ಸಚಿವರು ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಯು ಕಾಸರಗೋಡಿನ ಬೆಳವಣಿಗೆಗೆ ಮಹತ್ವದ ದಾರಿ ಮಾಡಿಕೊಡಲಿದೆ. ಎರಡು ಫ್ಲೈಓವರ್‍ಗಳು, ನಾಲ್ಕು ಪ್ರಮುಖ ಸೇತುವೆಗಳು, ನಾಲ್ಕು ಸಣ್ಣ ಸೇತುವೆಗಳು, 21 ಅಂಡರ್‍ಪಾಸ್‍ಗಳು, 10 ಪಾದಚಾರಿ ಸೇತುವೆಗಳು ಮತ್ತು ಎರಡು ಮೇಲ್ಸೇತುವೆಗಳು ಪೂರ್ಣಗೊಂಡಿವೆ. ಇವುಗಳಲ್ಲಿ ಕಾಸರಗೋಡು ನಗರದ ಮೂಲಕ ಹಾದುಹೋಗುವ 1.12 ಕಿ.ಮೀ ಉದ್ದದ ಏಕ ಸ್ತಂಬದೊಂದಿಗೆ ನಿರ್ಮಾಣಗೊಂಡಿರುವ ಮೇಲ್ಸೇತುವೆ ಪ್ರಮುಖ ಆಕರ್ಷಣೆಯಾಗಿದೆ. ಇದು ದಕ್ಷಿಣ ಭಾರತದಲ್ಲಿ ನಿರ್ಮಿಸಲಾದ ಮೊದಲ ಸಿಂಗಲ್-ಪಿಲ್ಲರ್ ಬಾಕ್ಸ್ ಗಿರ್ಡರ್ ಸೇತುವೆಯಾಗಿದ್ದು, 27 ಮೀಟರ್ ಅಗಲವಿದೆ. ಇದರೊಂದಿಗೆ, ಉಪ್ಪಳದಲ್ಲಿ 210 ಮೀಟರ್ ಉದ್ದದ ಮತ್ತೊಂದು ಮೇಲ್ಸೇತುವೆ ನಿರ್ಮಿಸಲಾಗಿದೆ. ಮೊಗ್ರಾಲ್, ಕುಂಬಳೆ, ಶಿರಿಯಾ ಮತ್ತು ಉಪ್ಪಳ ನದಿಗಳನ್ನು ಸಂಪರ್ಕಿಸುವ ದೊಡ್ಡ ಸೇತುವೆಗಳನ್ನು ಸಹ ನಿರ್ಮಿಸಲಾಗುತ್ತಿದೆ.
ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಸಮಾಲೋಚಿಸಿ, ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯ ಸರ್ಕಾರವು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‍ಎಚ್‍ಎಐ) ಮೂಲಕ 5800 ಕೋಟಿ ರೂ. ವೆಚ್ಚಲದಲಿ ಬೃಹತ್ ಯೋಜನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಶಾಸಕ ಎಂ.ರಾಜಗೋಪಾಲನ್, ಎನ್‍ಎಚ್‍ಎಐ ಉಪ ವ್ಯವಸ್ಥಾಪಕ ಜಸ್ ಪ್ರೀತ್, ಟೀಮ್ ಲೀಡರ್ ಎಸ್.ಕೆ. ಸಿನ್ಹಾ, ಯುಎಲ್‍ಸಿಸಿ ನಿರ್ದೇಶಕರಾದ ಪಿ.ಪ್ರಕಾಶನ್, ಕೆ.ಟಿ. ರಾಜನ್, ಪಿ.ಕೆ. ಶ್ರೀಜಿತ್, ಯೋಜನಾ ವ್ಯವಸ್ಥಾಪಕ ಎಂ. ನಾರಾಯಣನ್ ಮತ್ತಿತರರು ಉಪಸ್ಥಿತರಿದ್ದರು.


