ಕಾಸರಗೋಡು: ಸಾಂಪ್ರದಾಯಿಕವಾಗಿ ಪ್ರವೇಶ ನಿರ್ಬಂಧಿಸಲಾಗಿದ್ದ ದೇವಾಲಯದ ಒಳಾಂಗಣಕ್ಕೆ(ನಾಲಂಬಲ) ಜನರು ಮುಕ್ತ ಪ್ರವೇಶ ನಡೆಸಿದ ಘಟನೆ ಕಾಸರಗೋಡಿನ ಪಿಲಿಕ್ಕೋಡಿನಲ್ಲಿರುವ ಶ್ರೀ ರಾಯರಮಂಗಲ ಭಗವತಿ ದೈವಸ್ಥಾನದಿಂದ ವರದಿಯಾಗಿದೆ.
ಕಳೆದ ತಿಂಗಳು ನವೀಕರಣ ಮತ್ತು ಪುನರ್ ಪ್ರತಿಷ್ಠಾಪನಾ ಮಹೋತ್ಸವ ನಡೆದ ದೈವಸ್ಥಾನಕ್ಕೆ ಸಮುದಾಯದ ಎಲ್ಲಾ ವರ್ಗಗಳಿಗೂ ಪ್ರವೇಶ ಕಲ್ಪಿಸಬೇಕೆಂದು ಒತ್ತಾಯಿಸಿ ಪಿಲಿಕ್ಕೋಡ್ ನಿನಾವ್ ಪುರುಷ ಸ್ವ ಸಹಾಯ ಸಂಘವು ನಿರ್ಣಯ ಮಂಡಿಸಿತ್ತು. ನಂತರ, ಜನತಾ ಸಮಿತಿಯ ಮಧ್ಯಸ್ಥಿಕೆಯಿಂದ, ದೈವಸ್ಥಾನದ ಒಳಾಂಗಣ ಪ್ರವೇಶಿಸಲಾಯಿತು.
ದೇವಾಲಯಕ್ಕೆ ಸಂಬಂಧಿಸಿದ ಸಮಾರಂಭಗಳಲ್ಲಿ, ನಂಬೂದಿರಿ ಮತ್ತು ವಾರಿಯರ್ ಸಮುದಾಯಗಳಿಗೆ ಮಾತ್ರ ಆಚರಣೆಯಂತೆ ನಾಲಂಬಲ ಪ್ರವೇಶಿಸಲು ಅವಕಾಶವಿತ್ತು. ದೈವಸ್ಥಾನದೊಳಗೆ ಎಲ್ಲಾ ವರ್ಗದ ಭಕ್ತರಿಗೆ ಪ್ರವೇಶ ಅವಕಾಶ ನೀಡಬೇಕೆಂಬುದು ದಶಕಗಳಿಂದ ಇಲ್ಲಿ ಕೇಳಿಬರುತ್ತಿದ್ದ ಬೇಡಿಕೆಯಾಗಿತ್ತು.
ಉತ್ಸವ ಸಮಾರಂಭಗಳು ಮುಗಿದ ನಂತರ ಜನರು ಭಾನುವಾರ ದೇವಾಲಯವನ್ನು ಪ್ರವೇಶಿಸಿದರು. ದೈವಸ್ಥಾನದ ಒಳಾಂಗಣಕ್ಕೆ ಪ್ರವೇಶ ಪಡೆಯುವುದು ಭಕ್ತರ ಬಹುದಿನಗಳ ಬಯಕೆಯಾಗಿತ್ತು. ವರ್ಷಗಳ ಹಿಂದೆ ಪ್ರಯತ್ನಗಳು ನಡೆದವು, ಆದರೆ ವಿರೋಧದಿಂದಾಗಿ ಅವು ಸಾಧ್ಯವಾಗಿರಲಿಲ್ಲ.

.jpg)
