ಮುಂಬೈ: ಖ್ಯಾತ ಭೌತಶಾಸ್ತ್ರಜ್ಞ ಮತ್ತು ಬರಹಗಾರ ಜಯಂತ್ ನಾರ್ಲಿಕರ್ ಅವರು ಇಂದು (ಮಂಗಳವಾರ) ಪುಣೆಯಲ್ಲಿ ನಿಧನರಾಗಿದ್ದಾರೆ.
ಜಯಂತ್ ನಾರ್ಲಿಕರ್ ಅವರಿಗೆ 86 ವರ್ಷ ವಯಸ್ಸಾಗಿತ್ತು. ಅವರು ಮೂವರು ಪುತ್ರಿಯರಾದ ಗೀತಾ, ಗಿರಿಜಾ ಮತ್ತು ಲೀಲಾವತಿ ಅವರನ್ನು ಅಗಲಿದ್ದಾರೆ.
ಜಯಂತ್ ಅವರ ಪತ್ನಿ, ಶಿಕ್ಷಣತಜ್ಞೆ ಮಂಗಳಾ ಅವರು 2023ರ ಜುಲೈ 17ರಂದು ನಿಧನರಾಗಿದ್ದರು.
'ಬಿಗ್ ಬ್ಯಾಂಗ್' ಮಾದರಿಗೆ ಪರ್ಯಾಯ ಮಾದರಿಗಳನ್ನು ಪ್ರತಿಪಾದಿಸಿದ್ದಕ್ಕಾಗಿ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯಿಂದಾಗಿ ನಾರ್ಲಿಕರ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ.
ಜಯಂತ್ ಅವರು 1994ರಿಂದ 1997ರವರೆಗೆ ಅಂತರರಾಷ್ಟ್ರೀಯ ಖಗೋಳ ಒಕ್ಕೂಟದ ವಿಶ್ವವಿಜ್ಞಾನ ಆಯೋಗದ ಅಧ್ಯಕ್ಷರಾಗಿದ್ದರು. ನಾರ್ಲಿಕರ್ ಅಂತರ ವಿಶ್ವವಿದ್ಯಾನಿಲಯ ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ ಕೇಂದ್ರದಲ್ಲಿ (IUCAA) ಪ್ರೊಫೆಸರ್ ಆಗಿದ್ದರು.
ನಾರ್ಲಿಕರ್ ಅವರು 1938ರ ಜುಲೈ 19ರಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಜನಿಸಿದ್ದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ (ಬಿಎಚ್‌ಯು) ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದಿದ್ದರು. ನಾರ್ಲಿಕರ್ ತಂದೆ ವಿಷ್ಣು ವಾಸುದೇವ ನಾರ್ಲಿಕರ್ ಗಣಿತ ವಿಭಾಗದ ಪ್ರಾಧ್ಯಾಪಕದ್ದರು. ಅವರ ತಾಯಿ ಸುಮತಿ ನಾರ್ಲಿಕರ್ ಸಂಸ್ಕೃತ ವಿದ್ವಾಂಸರಾಗಿದ್ದರು.
ನಾರ್ಲಿಕರ್ ಅವರು 1957ರಲ್ಲಿ ಬಿಎಚ್‌ಯುನಲ್ಲಿ ಖಗೋಳ ವಿಜ್ಞಾನ ವಿಷಯದಲ್ಲಿ ಬಿ.ಎಸ್ಸಿ ಪದವಿ ಪಡೆದಿದ್ದರು. ಬಳಿಕ 1960ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಬಿ.ಎ., 1963ರಲ್ಲಿ ಪಿಎಚ್‌ಡಿ, 1964ರಲ್ಲಿ ಎಂ.ಎ. ಮತ್ತು 1976ರಲ್ಲಿ ಎಸ್‌ಸಿಡಿ ಪೂರ್ಣಗೊಳಿಸಿದ್ದರು. ಗೋಳ ಭೌತಶಾಸ್ತ್ರದಲ್ಲಿ ಪರಿಣತಿ ಹೊಂದಿದ್ದ ನಾರ್ಲಿಕರ್‌ಗೆ 1962ರಲ್ಲಿ ಸ್ಮಿತ್ ಪ್ರಶಸ್ತಿ ಮತ್ತು 1967ರಲ್ಲಿ ಆಡಮ್ಸ್ ಪ್ರಶಸ್ತಿ ಲಭಿಸಿತ್ತು.
ನಾರ್ಲಿಕರ್ ಅವರು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ಗೆ (1972-1989) ಸೇರುವ ಉದ್ದೇಶದಿಂದ ಭಾರತಕ್ಕೆ ಮರಳಿದ್ದರು. 1988ರಿಂದ 2003ರವರೆಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಪ್ರಸ್ತಾವಿತ ಅಂತರ ವಿಶ್ವವಿದ್ಯಾಲಯ ಖಗೋಳವಿಜ್ಞಾನ ಮತ್ತು ಆಸ್ಟ್ರೋಫಿಸಿಕ್ಸ್ ಕೇಂದ್ರದ (IUCAA) ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.
ನಾರ್ಲಿಕರ್ ಅವರು 2021ರ ಜನವರಿಯಲ್ಲಿ ನಾಸಿಕ್‌ನಲ್ಲಿ ನಡೆದ 94ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ನಾರ್ಲಿಕರ್ ಅವರಿಗೆ ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಮಹಾರಾಷ್ಟ್ರ ಭೂಷಣ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.

