ಕಾಸರಗೋಡು: ಮುಂಗಾರುಪೂರ್ವ ಮಳೆ ಕಾಸರಗೋಡು ಸೇರಿದಂತೆ ಕೇರಳದ ಬಹುತೇಕ ಜಿಲ್ಲೆಗಳಲ್ಲಿ ಅಪಾರ ನಾಶ ನಷ್ಟಕ್ಕೆ ಕಾರಣವಾಗಿದೆ. ಬಿರುಸಿನ ಗಾಳಿಯಿಂದ ಕೂಡಿದ ಮಳೆಗೆ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿದೆ. ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿತ್ತು. ಕೇರಳದಲ್ಲಿ ತಿರುವನಂತಪುರ, ಕೊಲ್ಲಂ ಹಾಗೂ ಆಲಪ್ಪುಳ ಹೊರತುಪಡಿಸಿ ಉಳಿದ ಹನ್ನೊಂದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮೇ 26ರಿಂದ 30ರ ವರೆಗೆ ರಾಜ್ಯದ ಮೀನುಗಾರರು ಸಮುದ್ರಕ್ಕಿಳಿಯದಂತೆ ಕೇಂದ್ರ ಹವಾಮಾನ ಇಲಾಖೆ ಸೂಚಿಸಿದೆ.
ಕಾಸರಗೋಡು ಪಳ್ಳಿಕುನ್ನು ಎಂಬಲ್ಲಿ ವಿದ್ಯತ್ ಹೈಟೆನ್ಶನ್ ಲೈನ್‍ಗೆ ತೆಂಗಿನ ಮರವುರುಳಿ ಬಿದ್ದ ಪರಿಣಾಮ ರೈಲು ಸಂಚಾರವನ್ನು ಅಲ್ಪ ಕಾಲ ಸ್ಥಗಿತಗೊಳಿಸಬೇಕಾಗಿಬಂದಿತ್ತು. ಮಂಗಳೂರಿಗೆ ತೆರಳುತ್ತಿದ್ದ ಮಲಬಾರ್ ಎಕ್ಸ್‍ಪ್ರೆಸ್ ರೈಲನ್ನು ಕಾಸರಗೋಡು ರೈಲ್ವೆ ನಿಲ್ದಾಣ ಹಾಗೂ ಪ್ಯಾಸೆಂಜರ್ ರೈಲನ್ನು ತಳಂಗರೆಯಲ್ಲಿ ನಿಲುಗಡೆಗೊಳಿಸಲಾಗಿತ್ತು. ಸೋಮವಾರ ಬೀಸಿದ ಬಿರುಸಿನ ಗಾಳಿಗೆ ಮರ ಉರುಳಿಬಿದ್ದಿದ್ದು, ಅಗ್ನಿಶಾಮಕ ದಳ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ವಿದ್ಯುತ್ ಸಂಪರ್ಕ ಮರುಸ್ಥಾಪಿಸಿದ ನಂತರ ರೈಲು ಸಂಚಾರ ಪುನಾರಂಭಗೊಂಡಿತ್ತು.
ಜಿಲ್ಲೆಯ ಬಹುತೇಕ ಹೊಳೆಗಳು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶದ ಜನತೆ ಜಗ್ರತೆ ಪಾಲಿಸುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಕುಂಬಳೆ ಸನಿಹದ ಬಂಬ್ರಾಣ ಬಯಲು ಸಂಪೂರ್ಣ ನೀರಿನಿಂದಾವೃತವಾಗಿದೆ. ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಮಂಜೇಶ್ವರ ಸನಿಹದ ಪೊಸೋಟ್ ಬಳಿ ಸರ್ವೀಸ್ ರಸ್ತೆಯಲ್ಲಿ ನೀರು ತುಂಬಿಕೊಂಡ ಪರಿಣಾಮ 15ಮನೆಗಳು ಹಾಗೂ ಹೊಸಂಗಡಿಯಲ್ಲಿ ಎಂಟು ಅಂಗಡಿಗಳಿಗೆ ಮಳೆನೀರು ನುಗ್ಗಿ ಹಾನಿಯುಂಟಾಗಿದೆ. ಕುಂಬಳೆ ಹಾಗೂ ಮಂಜೇಶ್ವರದ ಹೊಳೆಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದೆ.
ಚೆರ್ಕಳ-ಕಲ್ಲಡ್ಕ ಹೆದ್ದಾರಿಗೆ ಅಪಾಯ:
ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಪೆರ್ಲ ಸನಿಹದ ಗೋಳಿತ್ತಡ್ಕದಲ್ಲಿ ರಸ್ತೆಗೆ ಅಡ್ಡ ನಿರ್ಮಿಸಿದ್ದ ಕಿರುಸೇತುವೆಯಲ್ಲಿ ತ್ಯಾಜ್ಯ ತುಂಬಿಕೊಂಡ ಪರಿಣಾಮ ನೀರುಹರಿಯಲು ತಡೆಯುಂಟಾಗಿ ಕೆಳ ಪಾಶ್ರ್ವದ ಗುಡ್ಡ ಕುಸಿತಕ್ಕೀಡಾಗಿದೆ. ಈ ಪ್ರದೇಶದಿಂದ ಭಾರಿ ಪ್ರಮಾಣದ ಮಣ್ಣು ನೀರಿನೊಂದಿಗೆ ಕೆಳಭಾಗದ ಕೃಷಿಕರೊಬ್ಬರ ತೋಟದಲ್ಲಿ ದಾಸ್ತಾನಾಗಿದ್ದು, ಭಾರಿ ನಷ್ಟ ಸಂಭವಿಸಿದೆ. ಹೆದ್ದಾರಿಗೆ ಹೊಂದಿಕೊಂಡು ನಿರ್ಮಿಸಲಾಗಿರುವ ಕಚ್ಚಾ ರಸ್ತೆಯಿಂದ ಮಣ್ಣುಮಿಶ್ರಿತ ತ್ಯಾಜ್ಯ ಹರಿದು ಕಿರುಸೇತುವೆಯೊಳಗೆ ದಾಸ್ತಾನುಗೊಂಡಿರುವುದು ಈ ಪ್ರದೇಶದಲ್ಲಿ ಭೂಕುಸಿತಕ್ಕೆ ಕಾರಣವೆನ್ನಲಾಗುತ್ತಿದೆ. ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ಹೆದ್ದಾರಿ ಪೆರ್ಲ ಸನಿಹದ ಮತ್ರ್ಯ ಪ್ರದೇಶದಲ್ಲಿ ರಸ್ತೆ ತಳಭಾಗ ಟೊಳ್ಳಾಗಿದ್ದು, ಅಪಾಯ ಆಹ್ವಾನಿಸುತ್ತಿರುವ ಮಧ್ಯೆ, ಇಲ್ಲಿಂದ ಅನತಿ ದೂರದಲ್ಲಿ ಭೂಕುಸಿತವುಂಟಾಗಿರುವುದು ಕಾಸರಗೋಡು-ವಿಟ್ಲ-ಪುತ್ತೂರು ಹಾದಿ ಅಪಾಯವನ್ನು ಎದುರಿಸುವಂತಾಗಿದೆ.
ಕತ್ತಲೆಗಟ್ಟಿ ವರ್ಷಧಾರೆ-ಹೈರಾಣರಾದ ಜನತೆ- ವಿದ್ಯುತ್ ಮೊಟಕು
ಕುಂಬಳೆ/ಬದಿಯಡ್ಕ: ವಾತಾವರಣ ಕಲ್ಲಪಿಟ್ಟು ಸುರಿಯುತ್ತಿರುವ ಬಿರುಸಿನ ಮಳೆಗೆ ವಿವಿಧೆಡೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಶನಿವಾರ ರಾತ್ರಿ ಎಡನೀರು ಸಮೀಪದ ಚೂರಿಮೂಲೆ ಎಂಬಲ್ಲಿ ತೆಂಗಿನಮರವೊಂದು ರಸ್ತೆಯ ಮೇಲೆ ಸಾಗುತ್ತಿದ್ದ ವಿದ್ಯುತ್ ತಂತಿಗೆ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಬದಿಯಡ್ಕ ಗ್ರಾಮಪಂಚಾಯಿತಿ 12ನೇ ವಾರ್ಡಿನಲ್ಲಿ ವಳಮಲೆಯಲ್ಲಿ ವಾಸಿಸುವ ಉದನೇಶ್ವರ ಎಂಬವರ ಮನೆಯ ಹಿತ್ತಿಲು ಕುಸಿದಿದೆ. ಅದೇ ರೀತಿ ಚೆಡೆಕ್ಕಲ್ ಎಂಬಲ್ಲಿ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲಿಯೇ ನೀರುನಿಂತು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯುಂಟಾಗಿದೆ.
ವಿದ್ಯುತ್ ಮೊಟಕು :
ಶನಿವಾರದಿಂದ ಮೊದಲ್ಗೊಂಡು ಸುರಿಯುತ್ತಿರುವ ಗಾಳಿ ಮಳೆಗೆ ವಿವಿಧೆಡೆಗಳಲ್ಲಿ ವಿದ್ಯುತ್ ಕಂಬಗಳ ಧರೆಗುರುಳಿವೆ. ಕುಂಬಳೆ, ಸೀತಾಂಗೋಳಿ, ಮಂಜೇಶ್ವರ, ಮೀಯಪದವು,ಪೆರ್ಲ, ಬದಿಯಡ್ಕ, ಕಾರಡ್ಕ ಸೆಕ್ಷನ್‍ನಲ್ಲಿ ಸುಮಾರು 50 ಕ್ಕಿಂತಲೂ ಹೆಚ್ಚು ಕಂಬಗಳು ಹಾಗೂ 200ರಷ್ಟು ವಿದ್ಯುತ್ ತಂತಿಗಳು ತುಂಡಾಗಿ ಬಿದ್ದ ಪರಿಣಾಮ ವಿದ್ಯುತ್ ಕೈಕೊಟ್ಟಿದೆ. ಭಾನುವಾರ-ಸೋಮವಾರದ ಜಡಿಮಳೆಯನ್ನೂ ಲೆಕ್ಕಿಸದೆ ಕಾರ್ಮಿಕರು ಕೆಲಸಮಾಡುತ್ತಿದ್ದರೂ ಸಂಜೆ ತನಕ ವಿದ್ಯುತ್ ಬಾರದಿರುವುದು ಸಾರ್ವಜನಿಕರಿಗೆ ಸಮಸ್ಯೆಯುಂಟಾಗಿದೆ. ಆದರೆ ತೀವ್ರ ಪ್ರಮಾಣದ ಕಾರ್ಮಿಕರ ಕೊರತೆಯೂ ಎದ್ದುಕಂಡಿತು. ರಸ್ತೆಗಳಿಗೆ ಅಡ್ಡವಾಗಿ ಬಿದ್ದ ಮರಗಳನ್ನು ತೆರವುಗೊಳಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಹಕರಿಸಿದ್ದರು.
ಪೈವಳಿಕೆ ಗ್ರಾ.ಪಂ.ವ್ಯಾಪ್ತಿಯ ಲಾಲ್ ಭಾಗ್-ಕುರುಡಪದವು ರಸ್ತೆ(8 ಕಿಲೋಮೀಟರ್) ಸಂಪೂರ್ಣ ಜಲಾವೃತಗೊಂಡು ವಾಹನ ಸಂಚಾರ ದುಸ್ಥರವಾಯಿತು. ನೀರ್ಚಾಲು-ಪುದುಕೋಳಿ-ಮಾನ್ಯ ರಸ್ತೆಯೂ ಜಲಾವೃತಗೊಂಡು ಸಂಚಾರ ಸಮಸ್ಯೆ ಉಂಟಾಯಿತು.
ಕ್ವಾರೆ ಬಂದ್:
ಭಾರೀ ಮಳೆಯ ಕಾರಣ ಜಿಲ್ಲೆಯಾದ್ಯಂತ ಕೆಂಗಲ್ಲು ಕ್ವಾರೆಗಳಿಗೆ ಜಿಲ್ಲಾಧಿಕಾರಿಗಳು ಕಾರ್ಯಾಚರಣೆ ನಿಯಂತ್ರಣ ಹೇರಿದ್ದು ಸೋಮವಾರ ಯಾವುದೇ ಕ್ವಾರೆಗಳು ಕಾರ್ಯನಿರ್ವಹಿಸಿರಲಿಲ್ಲ.


.jpg)

.jpg)
