ಬದಿಯಡ್ಕ: ಗುರುವಿನ ಮಾತನ್ನು ಅನುಸರಿಸಿ ಮುಂದುವರಿದರೆ ಜೀವನದಲ್ಲಿ ಗೆಲುವು ನಮ್ಮದಾಗಲಿದೆ. ವೇದವನ್ನು ಕಾಪಾಡಿಕೊಂಡು ಗುರುಹಿರಿಯರ ಮಾರ್ಗದರ್ಶನದೊಂದಿಗೆ ಅಧ್ಯಯನಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕು. ಎಳವೆಯಲ್ಲಿಯೇ ಮಕ್ಕಳಿಗೆ ವೇದಾಧ್ಯಯನಕ್ಕೆ ಅವಕಾಶವನ್ನು ಕಲ್ಪಿಸುವಲ್ಲಿ ಪಾಲಕರು ಮುತುವರ್ಜಿ ವಹಿಸಬೇಕು. ವೇದವನ್ನು ಕಾಪಾಡಿಕೊಂಡಾಗ ಧರ್ಮವು ಉಳಿಯುತ್ತದೆ ಎಂದು ವೇದಮೂರ್ತಿ ಶ್ರೀರಾಮ ಭಟ್ ಮುಗುಳಿ ಹೇಳಿದರು.
ಕಾಸರಗೋಡು ಮತ್ತು ಹೊಸದುರ್ಗ ಹೈವ ಬ್ರಾಹ್ಮಣ ಸಭಾ ಪೆರಡಾಲ ಇದರ ವತಿಯಿಂದ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ನಡೆದ ರಜಾ ಕಾಲದ ವಸಂತ ವೇದಪಾಠ ಶಿಬಿರದ ಮಂಗಳವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಹಿತವಚನವನ್ನು ನೀಡಿ ಅವರು ಮಾತನಾಡಿದರು.
ಹಿಂದಿನ ವರ್ಷಗಳಲ್ಲಿ ಇದೇ ವೇದಪಾಠ ಶಾಲೆಯಲ್ಲಿ ತಾನು ಕಲಿತ ಅನುಭವವನ್ನು ತಿಳಿಸುತ್ತಾ ಉಪನೀತನಾದ ವಟುವು ಸಂಸ್ಕಾರವಂತನಾಗಿ ಬಾಳಲು ವೇದಾಧ್ಯಯ ಮಾಡುವುದು ನಮ್ಮ ಕರ್ತವ್ಯ. ಬ್ರಾಹ್ಮಣರ ಶ್ರೇಷ್ಠವಾದ ಸಂಸ್ಕಾರವನ್ನು ಮುನ್ನಡೆಸಬೇಕು ಎಂದರು.
ಹಿರಿಯರಾದ ಸುಬ್ರಹ್ಮಣ್ಯ ಶರ್ಮ ಸಂಪತ್ತಿಲ ಅಧ್ಯಕ್ಷತೆ ವಹಿಸಿದ್ದರು. ಉದಯಶಂಕರ ಭಟ್ ಕುಳ್ಳಂಬೆಟ್ಟು ಅತಿಥಿಗಳಾಗಿ ಮಾತನಾಡಿದರು. ಕೋಶಾಧಿಕಾರಿ ವೈ.ಕೆ.ಗೋವಿಂದ ಭಟ್, ಕಾರ್ಯದರ್ಶಿ ಶ್ಯಾಮಪ್ರಸಾದ ಕಬೆಕ್ಕೋಡು ವೇದಿಕೆಯಲ್ಲಿ ಉಪಸ್ಥಿತರಿದ್ದು ಅಧ್ಯಾಪಕರನ್ನು ಗೌರವಿಸಿದರು. ಮಹಾಗಣಪತಿ ಅಳಕ್ಕೆ ವರದಿಯನ್ನು ನೀಡಿದರು. ವೇದಮೂರ್ತಿ ವೆಂಕಟೇಶ್ವರ ಭಟ್ ಪಟ್ಟಾಜೆ ಮಕ್ಕಳಿಗೆ ಹಿತವಚನವನ್ನು ನೀಡಿದರು. ವಿಷ್ಣುಸಹಸ್ರನಾಮ ಪಾರಾಯಣದಲ್ಲಿ ಪ್ರಥಮ ಸ್ಥಾನ ಪಡೆದ ಚಿನ್ಮಯ ಕೃಷ್ಣ ಬಿ., ಹಾಗೂ ಪ್ರತಿಭಾನ್ವಿತ ವೇದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳು ತಾವು ಕಲಿತ ವೇದಮಂತ್ರಗಳನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಿದರು. ವೇದಮೂರ್ತಿ ಶಿವರಾಮ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮುರಳೀಧರ ಶರ್ಮ ಅಳಕ್ಕೆ ವಂದಿಸಿದರು. ಶಾಂತಿ ಮಂತ್ರದೊಂದಿಗೆ ಸಮಾರೋಪಗೊಂಡಿತು. ಏಪ್ರಿಲ್ 7ರಂದು ವಸಂತವೇದ ಶಿಬಿರ ಆರಂಭಗೊಂಡಿತ್ತು. ವಿದ್ಯಾರ್ಥಿಗಳ ಪಾಲಕರು ಪಾಲ್ಗೊಂಡಿದ್ದರು.

.jpg)
