ಕುಂಬಳೆ: ಕನ್ನಡ ಸಾಹಿತ್ಯದ ಮೂಲಕ ಮಕ್ಕಳಲ್ಲಿ ಭಾಷಾಭಿಮಾನ ಬೆಳೆಸಲು ಸಾಧ್ಯ. ಕನ್ನಡ ಕಟ್ಟುವ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಬೇಕಾದ ಸ್ಥಿತಿ ಇದೆ ಎಂದು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸ್ಥಾಪಕ ಸಂಚಾಲಕ ಡಾ. ವಾಮನ್ ರಾವ್ ಬೇಕಲ್ ಹೇಳಿದರು.
ಅವರು ಕೇರಳ ರಾಜ್ಯ- ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಶನಿವಾರ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಗೆ ನಡೆದ ಕನ್ನಡ ಸಾಹಿತ್ಯ ಮಾರ್ಗದರ್ಶನ ಅಭಿಯಾನದ 3ನೇ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಆಡಳಿತ ಸೇವಾ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಮಾತನಾಡಿ, ಪ್ರತಿಯೊಬ್ಬ ಕನ್ನಡಿಗರೂ ಬೇರೆ ಭಾಷೆಯ ಶಬ್ಧಗಳನ್ನು ಸೇರಿಸದ ಶುದ್ಧ ಕನ್ನಡದಲ್ಲಿ ವ್ಯವಹರಿಸುವ ಪ್ರತಿಜ್ಞೆ ಮಾಡಬೇಕು. ಇಂದಿನ ಶೈಕ್ಷಣಿಕ ಕ್ಷೇತ್ರದಲ್ಲಿ ವ್ಯಾಕರಣ ಬದ್ಧವಾದ ಸಾಹಿತ್ಯ ಕಲಿಕೆಯ ಅಗತ್ಯವಿದೆ. ಕನ್ನಡ ವ್ಯಾಕರಣದ ಬಗ್ಗೆ ನಿರ್ಲಕ್ಷ್ಯ ಸಲ್ಲದು ಎಂದು ಹೇಳಿದರು.
ಸಭೆಯಲ್ಲಿ ಪರಿಷತ್ತಿನ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ವಿ ಬಿ ಕುಳಮರ್ವ, ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾಲಕ್ಷ್ಮಿ ಕುಳಮರ್ವ, ಪರಿಷತ್ತಿನ ಜಿಲ್ಲಾ ಸಮಿತಿಯ ಅಧ್ಯಕ್ಷ ವಿರಾಜ್ ಅಡೂರು, ಕಾಸರಗೋಡಿನ ಕನ್ನಡ ಭವನ ಪ್ರಕಾಶನದ ಮುಖ್ಯಸ್ಥೆ ಸಂಧ್ಯಾರಾಣಿ ಟೀಚರ್, ಶಾಲೆಯ ಪಿಟಿಎ ಅಧ್ಯಕ್ಷ ಉದಯ ಕುಮಾರ್ ಎಂ, ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ದರ್ಭೆಮಾರ್ಗ, ನಿವೃತ್ತ ಮುಖ್ಯ ಶಿಕ್ಷಕಿ ಶಾರದಾ ಮೊಳೆಯಾರ್ ಎಡನೀರು ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಿಬಿರ ನಡೆಸಲು ಅವಕಾಶ ನೀಡಿದ ಶಾಲಾ ಮುಖ್ಯಸ್ಥರನ್ನು ಪರಿಷತ್ತಿನ ವತಿಯಿಂದ ಗೌರವಿಸಲಾಯಿತು.
ಶಿಬಿರದಲ್ಲಿ ಶಿಕ್ಷಕರಾದ ಪ್ರೇಮಲತ, ವಿದ್ಯಾಲಕ್ಷ್ಮಿ, ಶ್ರೀದೇವಿ, ದೇವಿಕಾ, ಸಂಧ್ಯಾ, ಅನುರಾಧಾ, ಪುಷ್ಪಲತಾ, ಶಾರದಾ, ವಿದ್ಯಾ ಹೆಗ್ಡೆ, ಚೈತ್ರಾ, ರಾಜೇಶ್, ಶಿವಾನಂದ, ಹರಿಪ್ರಸಾದ್ ಸಹಕರಿಸಿದರು. ಕನಿಹಾ ಮತ್ತು ಪೃಥ್ವಿ ಪ್ರಾರ್ಥನೆ ಹಾಡಿದರು. ಶಾಲೆಯ ಗ್ರಂಥಪಾಲಕಿ ವಿಜಯ ಸುಬ್ರಹ್ಮಣ್ಯ ಸ್ವಾಗತಿಸಿ, ನಿವೃತ್ತ ಶಿಕ್ಷಕಿ ಶಶಿಕಲಾ ಟೀಚರ್ ಕುಂಬಳೆ ವಂದಿಸಿದರು. ಶಿಕ್ಷಕಿ ಚಿತ್ರಕಲಾ ದೇವರಾಜ ಆಚಾರ್ಯ ಸೂರಂಬೈಲ್ ನಿರೂಪಿಸಿದರು. ನಂತರ ನಡೆದ ಶಿಬಿರದ ಪ್ರಬಂಧ ರಚನಾ ತರಬೇತಿಯಲ್ಲಿ ಶಿಕ್ಷಣ ತಜ್ಞ ವಿ ಬಿ ಕುಳಮರ್ವ ಹಾಗೂ ವ್ಯಂಗ್ಯಚಿತ್ರ ರಚನಾ ತರಬೇತಿಯಲ್ಲಿ ವ್ಯಂಗ್ಯಚಿತ್ರಗಾರ ವಿರಾಜ್ ಅಡೂರು ಮಾರ್ಗದರ್ಶನ ನೀಡಿದರು. ಶಿಬಿರದಲ್ಲಿ ಸುಮಾರು 100ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ಲಾ ಶಿಬಿರಾರ್ಥಿಗಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು. ಮಕ್ಕಳಿಗೆ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳ ಚಟುವಟಿಕೆಗಳ ಹಸ್ತಪ್ರತಿ ಸಂಕಲನವಾದ 'ವ್ಯಂಗ್ಯತರಂಗ' ಹಾಗೂ 'ಬರವಣಿಗೆ'ಯನ್ನು ಬಿಡುಗಡೆ ಮಾಡಲಾಯಿತು.

.jpg)


