ಕಾಸರಗೋಡು: ಕೇರಳದ ಕೊಲ್ಲಂ ಜಿಲ್ಲೆಯ ತೆವಲಕ್ಕರ ಬಾಲಕರ ಪ್ರೌಢಶಾಲೆ ವಿದ್ಯಾರ್ಥಿ ಮಿಥುನ್ ಸಾವಿಗೆ ಸರ್ಕಾರ ಮತ್ತು ಆಡಳಿತ ಮಂಡಳಿ ಕಾರಣವಾಗಿದೆ ಎಂದು ಎನ್‍ಟಿಯು ರಾಜ್ಯ ಉಪಾಧ್ಯಕ್ಷ ಕೆ.ಕೆ. ರಾಜೇಶ್ ತಿಳಿಸಿದ್ದಾರೆ. ಅವರು ವಿವಿಧ ಬೇಡಿಕೆ ಮುಂದಿರಿಸಿ ಕಾಸರಗೋಡಿನ ಶಿಕ್ಷಣ ಉಪ ನಿರ್ದೇಶಕರ ಕಚೇರಿಯ ಮುಂದೆ ಎನ್‍ಟಿಯು ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಲಾದ ಧರಣಿ ಉದ್ಘಾಟಿಸಿ ಮಾತನಾದರು.
ಸಿಪಿಎಂ ನಿಯಂತ್ರಣದಲ್ಲಿರುವ ಆಡಳಿತ ಮಂಡಳಿ ಮತ್ತು ಪಿಟಿಎ ಶಾಲೆಯ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದು, ಸರ್ಕಾರ ಮತ್ತು ಸಿಪಿಎಂ ಈ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಶಾಲಾ ಕಟ್ಟಡೆದ ಮೇಲಿಂದ ಹಾದುಹೋಗುವ ರೀತಿಯಲ್ಲಿ ವಿದ್ಯುತ್ ತಂತಿ ಎಳೆದಿದ್ದರೂ, ಶಾಲೆಗೆ ಫಿಟ್‍ನೆಸ್ ಸರ್ಟಿಫಿಕೇಟ್ ನೀಡುವಲ್ಲಿ ನಿಗೂಢತೆ ಅಡಕವಾಗಿದೆ. ಸಿಪಿಎಂ ಕೊಲ್ಲಂ ಜಿಲ್ಲಾ ಸಮಿತಿಯ ನಿಯಂತ್ರಣದಲ್ಲಿರುವ ಶಾಲೆಯ ವ್ಯವಸ್ಥಾಪಕರಾದ ಸ್ಥಳೀಯ ಕಾರ್ಯದರ್ಶಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಶಾಲಾ ಮುಖ್ಯ ಶೀಕ್ಷಕಿಯನ್ನು ಅಮಾನತುಗೊಳಿಸಿ ಸರ್ಕಾರ ಕೈತೊಳೆದುಕೊಳ್ಳುವಂತಿಲ್ಲ. ಅನುದಾನಿತ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಆಡಳಿತಾತ್ಮಕ ಮತ್ತು ಶೈಕ್ಷಣಿಕ ಮೇಲ್ವಿಚಾರಣೆಯನ್ನು ಮಾತ್ರ ಹೊಂದಿರುತ್ತಾರೆ
ಶಾಲೆಗೆ ಫಿಟ್‍ನೆಸ್ ಸರ್ಟಿಫಿಕೇಟ್ ನೀಡಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಮುಖ್ಯಶಿಕ್ಷಕಿಯನ್ನು ಅಮಾನತುಗೊಳಿಸಿರುವ ಕ್ರಮ ಖಂಡನೀಯ ಎಂದು ತಿಳಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಟಿ.ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಪಿ.ಪಿಎಂಶ್ರೀ ಯೋಜನೆಗಿರುವ ಸಮಸ್ಯೆ ಬಗೆಹರಿಸುವುದು, ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಮಾನದಂಡಗಳನ್ನು ಪರಿಷ್ಕರಿಸುವುದು ಮತ್ತು ಸಹಭಾಗಿತ್ವದ ಪಿಂಚಣಿ ಹಿಂಪಡೆಯುವುದು ಮುಂತಾದ ಬೇಡಿಕೆ ಮುಂದಿರಿಸಿ ಧರಣಿ ನಡೆಸಲಾಯಿತು. ಸತೀಶ್ ಕುಮಾರ್ ಶೆಟ್ಟಿ, ಕೆ.ಅರವಿಂದಕ್ಷ ಭಂಡಾರಿ, ಎ.ಸುಜಿತಾ, ಎಂ.ರಂಜಿತ್, ಕೆ.ದಿನೇಶ್. ಪಿ.ವಿ.ಉದಯಕುಮಾರ್, ಸಿ.ಚಂದ್ರಿಕಾ ಉಪಸ್ಥಿತರಿದ್ದರು. ಕೆ.ಅಜಿತ್ ಕುಮಾರ್ ಸ್ವಾಗತಿಸಿದರು. ಕೆ. ಭ್ರಮರಾಂಬಿಕಾ ವಂದಿಸಿದರು.


