ಕಾಸರಗೋಡು: ನಗರಸಭೆ ಕಾರ್ಯದರ್ಶಿಗೆ ಬೆದರಿಕೆ ಹಾಕಿದ ಶಾಸಕರು, ಮುಸ್ಲಿಂ ಲೀಗ್‍ನ ನಗರಸಭಾ ಸದಸ್ಯರು ಕಾರ್ಯದರ್ಶಿಯ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಬಿಜೆಪಿಯ ನಗರಸಭಾ ಸದಸ್ಯರು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಾಸರಗೋಡು ನಗರಸಭೆಯಲ್ಲಿ ಕಾರ್ಯದರ್ಶಿ ಹಾಗೂ ಇತರ ಸಿಬ್ಬಂದಿಗೆ ಬೆದರಿಕೆ ಹಾಕಿ ಹಲ್ಲೆ ನಡೆಸುತ್ತಿರುವುದು ಸಾಮಾನ್ಯವಾಗುತ್ತಿದ್ದು, ಕಾರ್ಯದರ್ಶಿಗೆ ಇಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಆಡಳಿತಪಕ್ಷದ ಏಕಪಕ್ಷೀಯ ಹಾಗೂ ಭ್ರಷ್ಟಾಚಾರದಿಂದ ಕೂಡಿದ ಆಡಳಿತಕ್ಕೆ ಬೆಂಬಲ ನೀಡದ ಕಾರ್ಯದರ್ಶಿ ಹಾಗೂ ಸಿಬ್ಬಂದಿಯನ್ನು ಮುಸ್ಲಿಂಲೀಗ್ ಸದಸ್ಯರು ಬೆದರಿಕೆ ತಂತ್ರದ ಮೂಲಕ ಮಣಿಸಲು ಮುಂದಾಗುತ್ತಿರುವುದು ಖಂಡನೀಯ ಎಂದು ಪ್ರತಿಪಕ್ಷ ಮುಖಂಡ ಪಿ.ರಮೇಶ್ ತಿಳಿಸಿದ್ದಾರೆ.
ಕಾಸರಗೋಡು ನಗರಸಭೆಯ ಅಭಿವೃದ್ಧಿಗೆ ಮುಸ್ಲಿಂ ಲೀಗ್ ತಡೆಯಾಗುತ್ತಿದ್ದು, ಅಧಿಕಾರಿಗಳು ನಗರಸಭೆಗೆ ಆಗಮಿಸಲೂ ಹಿಂದೇಟುಹಾಕುವ ಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿ ಪ್ರತಿಪಕ್ಷ ಜನಪ್ರತಿನಿಧಿಗಳು ಪ್ರತಿಭಟನೆ ಆಯೋಜಿಸಿದ್ದರು.
ನಗರಸಭಾ ಪ್ರತಿಪಕ್ಷ ಮುಖಂಡ ಪಿ. ರಮೇಶ್, ನಗರಸಭಾ ಸದಸ್ಯರಾದ ಸವಿತಾ ಟೀಚರ್, ಉಮಾ ಕಡಪ್ಪುರಂ, ವರಪ್ರಸಾದ್ ಕೋಟೆಕಣಿ, ಅಶ್ವಿನಿ, ಹೇಮಲತಾ, ಪವಿತ್ರ, ಶಾರದ, ವಿಮಲಾ, ಶ್ರೀಲತಾ, ವೀಣಾ ಶೆಟ್ಟಿ, ರಂಜಿತಾ ಪಾಲ್ಗೊಂಡಿದ್ದರು.


