HEALTH TIPS

ಕುಟುಂಬಶ್ರೀ ವತಿಯಿಂದ 'ಕರ್ಕಾಟಕ ಗಂಜಿ' ವಿತರಣೆ- ಸಿವಿಲ್‍ಸ್ಟೇಶನ್ ವಠಾರದಲ್ಲಿ ಸಮಾರಂಭಕ್ಕೆ ಚಾಲನೆ

ಕಾಸರಗೋಡು: ಕರ್ಕಾಟಕ ಮಾಸದಲ್ಲಿ ಆರೋಗ್ಯದಾಯಕ ಆಹಾರ ತಯಾರಿಯ ಬಗ್ಗೆ ಜನರಿಗೆ ಮಾಹಿತಿ ನೀಡುವಲ್ಲಿ ಕುಟುಂಬಶ್ರೀ ಕಾರ್ಯಕರ್ತರು ಮುಂದಾಗಬೇಕು ಎಂಬುದಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದ್ದಾರೆ. ಅವರು ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ ಕಾಸರಗೋಡು ಸಿವಿಲ್ ಸ್ಟೇಷನ್‍ನಲ್ಲಿ ನಡೆಯುತ್ತಿರುವ ಕರ್ಕಾಟಕ ಮಾಸದಲ್ಲಿ ವಿತರಿಸುವ ಔಷಧೀಯ ಗುಣವುಳ್ಳ ಗಂಜಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.  

ಕರ್ಕಾಟಕ ಮಾಸದಲ್ಲಿ ರೋಗಗಳನ್ನು ತಡೆಗಟ್ಟುವಲ್ಲಿ ಕರ್ಕಾಟಕ ಗಂಜಿಯ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದರ ಜತೆಗೆ ಪ್ರತಿ ಮನೆಗೂ ಕರ್ಕಾಟಕ ಗಂಜಿ ಒದಗಿಸುವುದು ಮತ್ತು ಆ ಮೂಲಕ ಎಲ್ಲರಿಗೂ ಆರೋಗ್ಯ ಒದಗಿಸುವುದು ಇದರ ಉದ್ದೇಶವಾಗಿದೆ. ಎಲ್ಲಾ ಕುಟುಂಬಶ್ರೀ ಸದಸ್ಯರು ಸಣ್ಣ ಉದ್ದಿಮೆಗಳನ್ನು ಆರಂಭಿಸುವ ಮೂಲಕ ಯಶಸ್ವೀ ಉದ್ಯಮಿಗಳಾಗಲು ಸಿದ್ಧರಾಗಬೇಕು ಎಂದು ಹೇಳಿದರು.

ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಕೆ.ರತೀಶ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಥಳೀಯವಾಗಿ ಲಭ್ಯವಿರುವ ಗಿಡಮೂಲಿಕೆಗಳನ್ನು ಬಳಸಿ ಸುಲಭವಾಗಿ ತಯಾರಿಸಬಹುದಾದ ಕರ್ಕಾಟಕ ಗಂಜಿ ಸ್ಮರಣಶಕ್ತಿ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಹೊಟ್ಟೆ ಹುಣ್ಣುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಆಯುರ್ವೇದದಲ್ಲೂ ಇದರ ಬಗ್ಗೆ ಉಲ್ಲೇಖವಿದ್ದು,  ಇದು ರಕ್ತವನ್ನು ಶುದ್ಧೀಕರಿಸಿ,  ಜೀವಕೋಶಗಳಿಗೆ ಉಂಟಾಗುವ ಹಾನಿ ಮತ್ತು ಸಂಧಿವಾತದಂತಹ ನೋವನ್ನು ಕಡಿಮೆ ಮಾಡಲು ಮತ್ತು ದೇಹದಿಂದ ವಿಷಾಂಶ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಹೊರಹಾಕಲು ಸಹಕಾರಿಯಾಗಿದೆ ಎಂದು ತಿಳಿಸಿದರು.,

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಕೆ.ಶಮೀನಾ ಅವರಿಗೆ ಔಷಧೀಯ ಗಂಜಿ ಹಸ್ತಾಂತರಿಸುವ ಮೂಲಕ ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಕೆ.ರತೀಶ್ ಕುಮಾರ್ ಪ್ರಥಮ ಮಾರಾಟವನ್ನು ನಡೆಸಿಕೊಟ್ಟರು. ಕುಟುಂಬಶ್ರೀ ಜಿಲ್ಲಾ ಸಹಾಯಕ ಮಿಷನ್ ಸಂಯೋಜಕ ಸಿ.ಎಚ್.ಇಕ್ಬಾಲ್, ಸಿಡಿಎಸ್ ಅಧ್ಯಕ್ಷರಾದ ಮುಮ್ತಾಜ್ ಅಬೂಬಕರ್, ಸುನೀತಾ, ಪಿ.ಕೆ.ಕದೀಜಾ, ಸುಮಾ, ಕುಟುಂಬಶ್ರೀ ಜಿಲ್ಲಾ ಕಾರ್ಯಕ್ರಮ ಸಂಚಾಲಕ ಕೆ.ಟಿ.ಜಿತಿನ್ ಉಪಸ್ಥಿತರಿದ್ದರು. ಕುಟುಂಬಶ್ರೀಎಡಿಎಂಸಿ ಡಿ ಹರಿದಾಸ್ ಸ್ವಾಗತಿಸಿದರು. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಟಿ ಪಿ ಆದಿರಾ ವಂದಿಸಿದರು.  ಕರ್ಕಾಟಕ ಗಂಜಿ ಉತ್ಸವ ಜುಲೈ 26ರ ವರೆಗೆ ನಡೆಯಲಿದೆ.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries