ಕಾಸರಗೋಡು: ಸಮುದ್ರ ಕೊರೆತದಿಂದಾಗಿ ಸಮಸ್ಯೆ ಅನುಭವಿಸುತ್ತಿರುವ ಅಜಾನೂರ್ ಕರಾವಳಿ ಪ್ರದೇಶಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ಮತ್ತು ತಂಡ ಭೇಟಿ ನೀಡಿ ಮೀನುಗಾರರ ಜತೆ ಸಮಾಲೋಚನೆ ನಡೆಸಿದರು.
ಅಜನೂರ್ ಕರಾವಳಿಯ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಪಕ್ಷ ಬದ್ಧವಾಗಿದೆ. ಅಜಾನೂರಿನಲ್ಲಿ ಮೀನುಗಾರಿಕಾ ಬಂದರು ಸ್ಥಾಪನೆಯ ಕನಸು ಸಾಕಾರಗೊಳಿಸಲು ಪಕ್ಷ ಎಲ್ಲ ರೀತಿಯ ಸಹಕಾರ ಒದಗಿಸಲಿದೆ ಎಂದು ಹೇಳಿದರು. ಅಜಾನೂರ್ ಕರಾವಳಿಯಲ್ಲಿ ಸಮುದ್ರ ಕೊರೆತದಿಂದ ಉಂಟಾಗಿರುವ ನಾಶನಷ್ಟಗಳನ್ನು ಸರ್ಕಾರದ ಗಮನಕ್ಕೆ ತರಲು ಕ್ರಮ ಕೈಗೊಳ್ಳಲಾಗುವುದು. ಕರಾವಳಿ ಪ್ರದೇಶದ ಅಪಾಯಕಾರಿ ರಸ್ತೆಗಳು ಮತ್ತು ಮೀನಿಳಿಸುವ ಕೇಂದ್ರವನ್ನು ಸಂರಕ್ಷಿಸಲು ರಾಜ್ಯ ಸರ್ಕಾರ ತುರ್ತಾಗಿ ಮಧ್ಯಪ್ರವೇಶಿಸಬೇಕೆಂದು ಅಶ್ವಿನಿ ಒತ್ತಾಯಿಸಿದರು.
ಈ ಸಂದರ್ಭ ಅಜಾನೂರು ಶ್ರೀ ಕುರುಂಬ ಭಗವತಿ ದೇವಸ್ಥಾನದ ಪ್ರತಿನಿಧಿಗಳು, ಮೀನುಗಾರರು ಮತ್ತು ಗೃಹಿಣಿಯರೊಂದಿಗೆ ಅಶ್ವಿನಿ ಎಂ.ಎಲ್ ಸಮಾಲೋಚನೆ ನಡೆಸಿದರು. ಬಿಜೆಪಿ ಕಾಞಂಗಾಡ್ ಮಂಡಲ ಅಧ್ಯಕ್ಷ ಮಂಡಲ ಪ್ರಶಾಂತ್, ದಕ್ಷಿಣ ಮಂಡಲ ಕಾರ್ಯದರ್ಶಿ ಎಂ. ಪ್ರದೀಪ್ ಕುಮಾರ್ ಮತ್ತು ಕಾಞಂಗಾಡ್ ನಗರಸಭಾ ಸದಸ್ಯ ಎನ್. ಅಶೋಕ್ ಕುಮಾರ್ ಉಪಸ್ಥಿತರಿದ್ದರು.


