ಪೆರ್ಲ: ಕೃಷಿಪ್ರದೇಶದಲ್ಲಿ ಉಪಟಳ ನೀಡುತ್ತಿರುವ ಕಾಡುಹಂದಿಗಳ ನಿಗ್ರಹಕ್ಕೆ ಸರ್ಕಾರ ಅವಕಾಶ ನೀಡಿದ್ದರೂ, ಶಾರ್ಪ್ ಶೂಟರ್‍ಗಳ ಕೊರತೆಯಿಂದ ಯೋಜನೆ ಯಶಸ್ವಿಯಾಗಿ ಮುಂದುವರಿಯುತ್ತಿಲ್ಲ. ಉಪಟಳ ನೀಡುವ ಕಾಡುಹಂದಿಗಳನ್ನು ಕೊಲ್ಲಲು ಅರಣ್ಯ ಇಲಾಖೆಯ ವಿಶೇಷ ಅನುಮತಿಯಿದ್ದರೂ, ಬಂದೂಕು ಪರವಾನಗಿ ಹೊಂದಿದ್ದರೂ, ಇದಕ್ಕೆ ಕೃಷಿಕರು ಮುಂದಾಗುತ್ತಿಲ್ಲ.
ಕಾಸರಗೋಡು ಜಿಲ್ಲೆಯಲ್ಲಿ 1071ಮಂದಿ ಕೋವಿ ಪರವಾನಗಿ ಹೊಂದಿದವರಿದ್ದರೂ, ಶಾರ್ಪ್ ಶೂಟರ್‍ಗಳಾಗಿ ಮುಂದೆ ಬಂದವರು ಕೇವಲ 33ಮಂದಿ ಮಂದಿ. ಅರಣ್ಯ ಇಲಾಖೆಯ ಎಂ. ಪ್ಯಾನಲ್‍ನಲ್ಲಿ ಈಗಾWಗಲೇ 33ಮಂದಿ ಹೆಸರು ನೋಂದಾಯಿಸಿದ್ದರೂ, ಜಿಲ್ಲೆಯಲ್ಲಿ ಮತ್ತಷ್ಟು ಸಂಖ್ಯೆಯ ಶಾರ್ಪ್ ಶೂಟರ್‍ಗಳ ಅಗತ್ಯವಿದೆ. ಕಾಸರಗೋಡು ಜಿಲ್ಲಾಡಳಿತದ ಲೆಕ್ಕಾಚಾರ ಪ್ರಕಾರ ಈ ವರ್ಷ 1071ಮಂದಿ ಬಂದೂಕು ಲೈಸನ್ಸ್ ಹೊಂದಿರುವವರಲ್ಲಿ 946ಮಂದಿ ತಮ್ಮ ಬಂದೂಕು ಪರವಾನಗಿ ನವೀಕರಿಸಿಕೊಂಡಿದ್ದಾರೆ. ಬಾಕಿ ಉಳಿದವರ ಬಂದೂಕು ಪರವಾನಗಿ ನವೀಕರಣೆಗಿರುವ ಅರ್ಜಿಗಳು ಪರಿಶೀಲನೆಯಲ್ಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪರವಾನಗಿ ಹೊಂದಿರುವವರು ತಮ್ಮ ಕೃಷಿ ಸಂರಕ್ಷಣೆಗಾಗಿ ಬಂದೂಕು ಪಡೆದುಕೊಂಡವರಾಗಿದ್ದಾರೆ.
ಗುಂಡಿಕ್ಕಲು ಇವರಿಗಿದೆ ಅವಕಾಶ:
ಊರಲ್ಲಿ ಉಪಟಳ ನೀಡುವ ಕಾಡು ಹಂದಿಗಳನ್ನು ಗುಂಡಿಕ್ಕಿಕೊಲೆಗೈಯಲು ಸರ್ಕಾರ ಪವಾನಗಿ ಹೊಂದಿದ ಬಂದೂಕುಧಾರಿಗಳಿಗೆ ಅವಕಾಶ ನೀಡಿದ್ದು, ಇವರು ಅರಣ್ಯ ಇಲಾಖೆಯಲ್ಲಿ ತಮ್ಮ ಹೆಸರು ನೋಂದಾಯಿಸಿರಬೇಕು. ಅರಣ್ಯ ಇಲಾಖೆಯ ಎಂ ಪ್ಯಾನಲ್‍ನಲ್ಲಿ ಹೆಸರು ನೋಂದಾಯಿಸಿದ ಯಾರಿಗಾದರೂ, ತಮ್ಮ ಪರವಾನಗಿ ಹೊಂದಿದ ಬಂದೂಕುಗಳಿಂದ ಇಲಾಖೆ ಮಾನದಂಡ ಪ್ರಕಾರ ಹಂದಿಗಳನ್ನು ಹೊಡೆದುರುಳಿಸಬಹುದಾಗಿದೆ. ಜಿಲ್ಲೆಯಲ್ಲಿ ಹಲವು ಮಂದಿ ಲೈಸನ್ಸ್‍ಧಾರಿ ಬಂದೂಕುಧಾರಿಗಳಿದ್ದರೂ, ಇವರಲ್ಲಿ ಬಹುತೇಕ ಮಂದಿ ಇನ್ನೂ ಎಂ ಪ್ಯಾನಲ್‍ನಲ್ಲಿ ತಮ್ಮ ಹೆಸರು ನೋಂದಾಯಿಸಿಲ್ಲ.
ಕಾಸರಗೋಡು ರಾಜ್ಯದಲ್ಲೇ ಅತಿಹೆಚ್ಚು ಕಾಡುಹಂದಿಗಳ ಉಪಟಳ ಹೊಂದಿರುವ ಜಿಲ್ಲೆಯಾಗಿದೆ. ಅರಣ್ಯ ಇಲಾಖೆ ಲೆಕ್ಕಾಚಾರ ಪ್ರಕಾರ 21ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡು ಹಂದಿಗಳ ಅತೀವ ಉಪಟಳ ಹೊಂದಿದೆ. ಈ ಕಾಡು ಹಂದಿಗಳು ಕೃಷಿಗೆ ಮಾತ್ರವಲ್ಲಿ ಜನರ ಪ್ರಾಣಕ್ಕೂ ಅಪಾಯ ತಂದೊಡ್ಡುತ್ತಿದೆ. ಕಳೆದ ಹತ್ತು ವರ್ಷದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಕಾಡು ಹಂದಿ ದಾಳಿಯಿಂದ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದರೆ, ಸುಮಾರು 60ಮಂದಿ ಗಾಯಗೊಂಡಿದ್ದಾರೆ. ಅರಣ್ಯ ಪ್ರದೇಶದ ಅಂಚಿಗೆ ಮಾತ್ರ ಕಂಡುಬರುತ್ತಿದ್ದ ಕಾಡುಹಂದಿಗಳು ತಳಂಗರೆ, ಕುಂಬಳೆ, ಚೆರ್ಕಳ ಮೊದಲಾದ ಪೇಟೆ ಪ್ರದೇಶಕ್ಕೂ ದಾಳಿಯಿಡಲಾರಂಭಿಸಿದೆ.
ಎಣ್ಮಕಜೆಯಲ್ಲಿ ಆರಂಭ:
ಉಪಟಳ ನೀಡುವ ಕಾಡುಹಂದಿಗಳನ್ನು ನಿಗ್ರಹಿಸುವ ಸರ್ಕಾರದ ಕಾನೂನನ್ನು ಕಾಸರಗೋಡು ಜಿಲ್ಲೆಯಲ್ಲಿ ಎಣ್ಮಕಜೆ ಪಂಚಾಯಿತಿ ಅಂದೇ ಜಾರಿಗೊಳಿಸಿತ್ತು. ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್ ಅವರು ನೇತೃತ್ವ ವಹಿಸಿ, ಶಾರ್ಪ್ ಶೂಟರ್‍ಗಳನ್ನು ಇತರ ಜಿಲ್ಲೆಗಳಿಂದ ಕರೆಸಿ ಹಂದಿಗಳನ್ನು ಕೊಲ್ಲುವ ಮೂಲಕ ಕೃಷಿಕರಲ್ಲಿ ಆಶಾಭಾವನೆ ಮೂಡಿಸಿದ್ದರು. ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 5(2)ಪ್ರಕಾರ ಡೆಲಿಕೇಟ್ ಮಾಡಿ ಲಭಿಸಿದ ವೈಲ್ಡ್ ಲೈಫ್ ವಾರ್ಡನ್ ಅಧಿಕಾರ ಬಳಸಿಕೊಂಡು ಅಂಗೀಕೃತ ಶೂಟರ್‍ಗಳಿಗೆ ಜವಾಬ್ದಾರಿ ನೀಡಿ ಕಾಡುಹಂದಿಗಳನ್ನು ನಿಗ್ರಹಿಸುವ ಕೆಲಸ ನಡೆಸಲಾಗಿತ್ತು. ಆದರೆ 10ರಿಂದ 15ಮಂದಿಯನ್ನೊಳಗೊಂಡ ಶಾರ್ಪ್‍ಶೂಟರ್‍ಗಳ ತಂಡಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಹಂದಿಗಳು ಲಭ್ಯವಾಗದ ಹಾಗೂ ಲಭಿಸಿದ ಹಂದಿಗಳನ್ನು ಅರಣ್ಯ ಇಲಾಖೆ ನಿಬಂಧನೆ ಪ್ರಕಾರ, ವೈಜ್ಞಾನಿಕ ರೀತಿಯಲ್ಲಿ ದಫನ ಮಾಡುವ ವಿಚಾರದಲ್ಲಿ ತಲೆದೋರಿದ ಸಮಸ್ಯೆಯಿಂದ ಯೋಜನೆಯನ್ನು ಅಲ್ಪಾವಧಿಯಲ್ಲಿ ಕೈಬಿಡಬೇಕಾಗಿ ಬಂದಿತ್ತು. ಅಲ್ಲದೆ ಈ ವೆಚ್ಚವನ್ನು ಸ್ಥಳೀಯಾಡಳಿತ ಸಂಸ್ಥೆಗಳೇ ಭರಿಸಬೇಕಾಗಿ ಬಂದಿರುವುದೂ ಪಂಚಾಯಿತಿಗೆ ಹೆಚ್ಚಿನ ಹೊರೆಯಾಗಿ ಪರಿಣಮಿಸಿತ್ತು. ಪ್ರಸಕ್ತ ಸರ್ಕಾರ ಗೌರವಧನ ನೀಡುವುದರ ಜತೆಗೆ ದಫನ ಪ್ರಕ್ರಿಯೆಯನ್ನೂ ನಡೆಸಲು ಮುಂದಾಗಿರುವುದು ಪಂಚಾಯಿತಿಗಳಿಗೆ ಒಂದಷ್ಟು ಸಮಾಧಾನ ತಂದುಕೊಟ್ಟಿದೆ.
ಅಭಿಮತ: ಶಾರ್ಪ್ ಶೂಟರ್‍ಗಳನ್ನು ಬಳಸಿಕೊಂಡು ಕಾಡುಹಂದಿಗಳ ಬೇಟೆ ನಡೆಸುವಲ್ಲೂ ಹಲವಾರು ಸಮಸ್ಯೆಗಳು ಎದುರಾಗುತ್ತಿದೆ. ಬಹುತೇಕ ಕಾಡುಹಂದಿಗಳೂ ಜನವಾಸ ಪ್ರದೇಶದ ಆಸುಪಾಸು ವಾಸ್ತವ್ಯಹೂಡುತ್ತಿರುವುದರಿಂದ ಹಗಲು ಹೊತ್ತಲ್ಲಿ ಹಂದಿಗಳನ್ನು ಬೇಟೆಯಾಡುವುದೂ ಕಷ್ಟಸಾಧ್ಯ. ಇನ್ನು ರಾತ್ರಿ ವೇಳೆ ಬೇಟೆಯಾಡಬೇಕಾದರೆ ಪರಿಣತಿ ಪಡೆದ ಶೂಟರ್‍ಗಳ ಜತೆಗೆ ಬೇಟೆ ಶ್ವಾನಗಳಿದ್ದರೇ ಯೋಜನೆ ಯಶಸ್ವಿಯಾಗಲು ಸಾಧ್ಯ. ಈ ಹಿಂದೆ ಎಣ್ಮಕಜೆ ಪಂಚಾಯಿತಿ ವತಿಯಿಂದ ಆರಂಭಿಸಿದ ಯೋಜನೆಯಲ್ಲಿ ಕೋಯಿಕ್ಕೋಡಿನ ಶ್ವಾನಗಳನ್ನೊಳಗೊಂಡ ಶಾರ್ಪ್‍ಶೂಟರ್‍ಗಳ ತಂಡದಿಂದ ಒಂದಷ್ಟು ಹಂದಿಗಳನ್ನು ಕೊಲ್ಲಲು ಸಾಧ್ಯವಾಗಿತ್ತು.
ಬಾಲಕೃಷ್ಣ ಗಾಂಭೀರ, ಪ್ರಗತಿಪರ ಕೃಷಿಕ
ಸ್ಥಾಯೀ ಸಮಿತಿ ಸದಸ್ಯ, ಎಣ್ಮಕಜೆ ಗ್ರಾಮ ಪಂಚಾಯಿತಿ



