ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿಯುತ್ತಿದ್ದಂತೆ ಜಿಲ್ಲೆಯ ಚೆರ್ವತ್ತೂರು ಸನಿಹ ರಾಷ್ಟ್ರೀಯ ಹೆದ್ದಾರಿ 66ರ ಷಟ್ಪಥ ಕಾಮಗಾರಿ ನಡೆಯುತ್ತಿರುವ ವೀರಮಲೆಬೆಟ್ಟ ಮತ್ತೆ ಕುಸಿದಿದ್ದು, ಭಾರೀ ಪ್ರಮಾಣದ ಮಣ್ಣು ರಸ್ತೆಗೆ ಬಂದು ಸೇರಿದೆ. ಭೂಕುಸಿತದಿಂದ ರಸ್ತೆಗೆ ಮಣ್ಣು ಬೀಳುತ್ತಿದ್ದಂತೆ ಈ ಹಾದಿಯಾಗಿ ಸಾಗುತ್ತಿದ್ದ ಕಾರೊಂದು ಬೆಟ್ಟದಿಂದ ಜಾರಿಬರುತ್ತಿದ್ದ ಮಣ್ಣಿನ ದಿಣ್ಣೆ ಮಧ್ಯೆ ಸಿಲುಕಿಕೊಂಡಿದ್ದು, ಅದರೊಳಗಿದ್ದವರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಪಡನ್ನಕ್ಕಾಡ್ ಎಸ್‍ಎನ್‍ಟಿಟಿಐ ಶಿಕ್ಷಕಿ ಕೆ. ಸಿಂಧು ಪಾರಾದವರು. ಬುಧವಾರ ಬೆಳಗ್ಗೆ ದುರಂತ ಸಂಭವಿಸಿದ್ದು, ಸಿಂಧು ಅವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು ವೀರಮಲೆಬೆಟ್ಟದ ಬಳಿ ತಲುಪುತ್ತಿದ್ದಂತೆ ಏಕಾಏಕಿ ಗುಡ್ಡ ಕುಸಿದು ರಸ್ತೆಗೆ ಮಣ್ಣು ಬಂದು ಸೇರಿದೆ. ಇದರಿಂದ ಕಾರನ್ನು ಮುಂದಕ್ಕೆ ಅಥವಾ ಹಿಂದಕ್ಕೆ ಚಲಿಸಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಸ್ಥಳದಲ್ಲಿದ್ದವರು ಶಿಕ್ಷಕಿಯನ್ನು ರಕ್ಷಿಸಿದ್ದಾರೆ. ವೀರಮಲೆ ಬೆಟ್ಟದಲ್ಲಿ ಪದೇಪದೆ ಭೂಕುಸಿತವುಂಟಾಗುತ್ತಿದ್ದು, ಹೆದ್ದಾರಿ ಕಾಮಗಾರಿ ವಹಿಸಿಕೊಮಡಿರುವ ಗುತ್ತಿಗೆದಾರರು ಹಾಗೂ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ ಆರೆಂಜ್ ಹಾಗೂ ಗುರುವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ತಗ್ಗು ಪ್ರದೇಶದ ಜನತೆ ಜಾಗ್ರತೆ ಪಾಲಿಸುವಂತೆ ಸೂಚಿಸಲಾಗಿದೆ. ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ. ಜುಲೈ 27ರ ವರೆಗೆ ಕೇರಳಾದ್ಯಂತ ಬಿರುಸಿನ ಮಳೆಯಾಗಲಿರುವುದಾಗಿ ಕೇಂದ್ರ ಹವಾಮಾನ ಇಲಾಖೆ ಸೂಚಿಸಿದೆ.



