ಕಾಸರಗೋಡು: ನಿವೃತ್ತ ಸರ್ಕಾರಿ ಅಧಿಕಾರಿ, ಉದುಮ ಆರಾಟುಕಡವು ನಿವಾಸಿ ಬಿ.ಟಿ ಜಯರಾಮ್ ಅವರು ದೀರ್ಘ ಕಾಲದ ಪರಿಶ್ರಮದೊಂದಿಗೆ ರಚಿಸಿರುವ ಮಲಯಾಳ-ಕನ್ನಡ ಶಬ್ದಕೋಶದ ಬೃಹತ್ ಗ್ರಂಥದ ಬಿಡುಗಡೆ ಸಮಾರಂಭ ಆ. 18ರಂದು ಮಧ್ಯಾಹ್ನ 2.30ಕ್ಕೆ ಕಾಸರಗೋಡು ನಗರಸಭಾಂಗಣದಲ್ಲಿ ಜರುಗಲಿದೆ. ಕೇರಳ ಭಾಷಾ ಇನ್‍ಸ್ಟಿಟ್ಯೂಟ್ ಮೂಲಕ ಪುಸ್ತಕ ಪ್ರಕಾಶನಗೊಳಿಸಲಾಗಿದೆ ಎಂದು ಕೇರಳ ಭಾಷಾ ಇನ್‍ಸ್ಟ್ಯೂಟ್ ರಿಸರ್ಚ್ ಅಧಿಕಾರಿ ರಾಫಿ ಎಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಮಲಯಾಳ-ಕನ್ನಡ ನಿಘಂಟು ಮುದ್ರಣಗೊಳ್ಳುತ್ತಿದ್ದು, ಎರಡೂ ಭಾಷೆಗಳ ಬಗ್ಗೆ ಹೆಚ್ಚಿನ ಸಂವಹನ ಇದರಿಂದ ಸಾಧ್ಯವಾಗಲಿದೆ. ಬಿ.ಟಿ ಜಯರಾಮ್ ಅವರು ಆರು ವರ್ಷಗಳ ಸುದೀರ್ಘ ಅಧ್ಯಯನದ ಮೂಲಕ ಮಲಯಾಳ-ಕನ್ನಡ ನಿಘಂಟು ತಯಾರಿಸಿದ್ದು, ಮೂರುವರೆ ಲಕ್ಷಕ್ಕೂ ಹೆಚ್ಚು ಪದಗಳನ್ನೊಳಗೊಮಡಿದೆ.
ಕರ್ನಾಟಕ ತುಳು ಅಕಾಡಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕ್ಕಾಡು ಸಮಾರಂಭ ಉದ್ಘಾಟಿಸಿ ಪುಸ್ತಕ ಬಿಡುಗಡೆಗೊಳಿಸುವರು. ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಶಾಸಕ ಇ. ಚಂದ್ರಶೇಖರನ್ ಪುಸ್ತಕ ಸ್ವೀಕರಿಸುವರು. ಅನುವಾದಕಿ, ಬರಹಗಾರ್ತಿ ಡಾ. ಮೀನಾಕ್ಷಿ ರಾಮಚಂದ್ರನ್ ಪುಸ್ತಕ ಪರಿಚಯ ನೀಡುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ, ಸಾಹಿತಿ ವಿ.ವಿ ಪ್ರಭಾಕರನ್, ಶಬ್ದಕೋಶ ರಚನಾಕಾರ ಬಿ.ಟಿ ಜಯರಾಮ್, ಪಾಲಕುನ್ನು ಕುಟ್ಟಿ ಉಪಸ್ಥಿತರಿದ್ದರು.

