ಕಾಸರಗೋಡು: ಕೇರಳ ಸರ್ಕಾರದ ಒಂದು ಕೋಟಿ ಸಸಿ ನೆಡುವ ಅಭಿಯಾನದ ಅಂಗವಾಗಿ ಹಸಿರು ಕೇರಳ ಮಿಷನ್ ನೇತೃತ್ವದಲ್ಲಿ ವಿವಿಧ ಸಂಸ್ಥೆಗಳಲ್ಲಿ ಜಾರಿಗೆ ತರಲಾಗುತ್ತಿರುವ 'ಸ್ನೇಹಿತಗೊಂದು ಸಸಿ' ಕಾರ್ಯಕ್ರಮ ಬೇಡಡ್ಕ ಗ್ರಾಮ ಪಂಚಾಯಿತಿಯಲ್ಲಿ ಜರುಗಿತು.
ಪಂಚಾಯತ್ ಪ್ರತಿನಿಧಿಗಳು ಮತ್ತು ನೌಕರರು ಚೀಟಿ ಎತ್ತುವ ಮೂಲಕ ಪರಸ್ಪರ ತಮ್ಮ ಸ್ನೇಹಿತರನ್ನು ಕಂಡುಕೊಳ್ಳುವುದರ ಜತೆಗೆ ತನ್ನ ಸ್ನೇಹಿತಗೆ ಸ್ನೇಹದ ಉಡುಗೊರೆಯಾಗಿ ಅವರಿಗೆ ಮರವಗಿ ಬೆಳೆಯಬಲ್ಲ ಸಸಿಗಳನ್ನು ಹಸ್ತಾಂತರಿಸಿದರು. ಬೇಡಡ್ಕ ಪಂಚಾಯಿತಿಯಲ್ಲಿ ಆಯೋಜಿಸಲಾಗಿದ್ದ ಈ ವಿಶಿಷ್ಟ ಕಾರ್ಯಕ್ರಮ ಸಾರ್ವಜನಿಕರಲ್ಲಿ ಕೌತುಕಕ್ಕೆ ಕಾರಣವಯಿತು. ಸ್ನೇಹಿತರ ನಡುವಿನ ಸೌಹಾರ್ದತೆ ದೀರ್ಘಕಾಲ ಉಳಿಯಬೇಕು ಎಂಬ ಕಾರಣಕ್ಕೆ ಬಹುತೇಕ ಮಂದಿ ಉತ್ತಮ ಹಣ್ಣಿನ ಸಸಿಗಳನ್ನು ಅಧಿಕ ಬೆಲೆ ನೀಡಿ ಖರೀದಿಸಿ, ಇದನ್ನು ಉಡುಗೊರೆಯಾಗಿ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯ ಅವರಿಗೆ ಹಣ್ಣಿನ ಮರದ ಸಸಿಯನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪಂಚಾಯಿತಿ ಉಪಾಧ್ಯಕ್ಷ ಎ. ಮಾಧವನ್ ಅಧ್ಯಕ್ಷತೆವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಲತಾ ಗೋಪಿ, ವರದರಾಜ್, ವಸಂತಕುಮಾರಿ, ಸಹಾಯಕ ಕಾರ್ಯದರ್ಶಿ ಪ್ರದೀಶ್, ಸಿಡಿಎಸ್ ಅಧ್ಯಕ್ಷೆ ಗುಲಾಬಿ ಎಂ ಮತ್ತು ಹಸಿರು ಕೇರಳ ಮಿಷನ್‍ನ ಆರ್.ಪಿ ಲೋಹಿತಾಕ್ಷನ್ ಉಪಸ್ಥಿತರಿದ್ದರು. ಪಂಚಾಯಿತಿ ಕಾರ್ಯದರ್ಶಿ ಎಸ್.ಎಸ್. ಅನೀಶ್ ಸ್ವಾಗತಿಸಿದರು. ಈ ಸಂದರ್ಭ ಸುಮಾರು 100 ಸಸಿಗಳನ್ನು ವಿತರಿಸಲಾಯಿತು.


