ಕಾಸರಗೋಡು: ಟ್ರಾಲಿಂಗ್ ನಿಷೇಧ ಕೊನೆಗೊಂಡು ಆಳ ಸಮುದ್ರ ಮೀನುಗಾರಿಕೆ ಆರಂಭಗೊಳ್ಳುತ್ತಿದ್ದಂತೆ ಮೀನಿನ ಬೆಲೆಯಲ್ಲಿ ಗಣನೀಯ ಕಡಿತವುಂಟಾಗಲಾರಂಭಿಸಿದೆ. ಬಡವರ ಮೀನು ಎಂದೇ ಬಿಂಬಿಸಲಾಗಿರುವ ಬಂಗುಡೆ, ಬೂತಾಯಿ ಮತ್ತೆ ಮಾರುಕಟ್ಟೆಯಲ್ಲಿ ತುಂಬಿಕೊಳ್ಳಲಾರಂಭಿಸಿದೆ.
ಟ್ರಾಲಿಂಗ್ ನಿಷೇಧಕ್ಕೂ ಮೊದಲು 300ರಿಂದ 400ರ ಅಂಚಿನಲ್ಲಿದ್ದ ಬಂಗುಡೆ ಧಾರಣೆ 100ರಿಂದ 120ರ ಅಂಚಿಗೆ ಹಾಗೇ ಬೂತಾಯಿ ದರ120ಕ್ಕೆ ಬಂದು ತಲುಪಿದೆ. ಇನ್ನು ಕಿಲೋಗೆ 1ಸಾವಿರ ವರೆಗೆ ಏರಿಕೆಯಾಗಿದ್ದ ಅಂಜಲ್ ಮೀನಿನ ದರ 500ರ ಅಂಚಿಗೆ ತಲುಪಿದೆ. ಇನ್ನು ಸಿಗಡಿ ದರವೂ 200ರೂ.ಗೆ ಇಳಿದಿದೆ. ಟ್ರಾಲಿಂಗ್ ನಿಷೇಧ ಸಂದರ್ಭ ಒಣ ಮೀನಿಗೂ ಭಾರೀ ದರ ಏರಿಕೆಯಾಗಿತ್ತು. ಮೀನಿನ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದ ಹಿನ್ನೆಲೆಯಲ್ಲಿ ಬಡ ಜನತೆ ಮೀನಿನ ಖಾದ್ಯದಿಂದ ದೂರ ಉಳಿಯಬೇಕಾಗಿ ಬಂದಿತ್ತು. ಧಾರಾಳ ಮೀನು ಲಭ್ಯವಾಗುತ್ತಿರುವುದರಿಂದ ಸಹಜವಾಗಿ ದರ ಕಡಿಮೆಯಾಗುತ್ತಿದ್ದರೂ, ಓಣಂ ಹಬ್ಬದ ವೇಳೆಗೆ ಮತ್ತೆ ದರ ಏರಿಕೆಯಾಗುವ ಸಾಧ್ಯತೆಯೂ ಹೆಚ್ಚಾಗಿದೆ. ಇನ್ನು ಮಾಂಸದ ಕೋಳಿ ದರದಲ್ಲೂ ಇಳಿಕೆ ಕಂಡಿದೆ. ಕಿಲೋಗೆ 140ರೂ. ಇದ್ದ ಬ್ರಾಯಿಲರ್ ಕೋಳಿ ದರ 120-125ರ ಅಂಚಿಗೆ ಇಳಿಕೆಯಾಗಿದೆ.

