ಕಾಸರಗೋಡು: ರಸ್ತೆ ಬದಿ ಲಾರಿ ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ಮರದಡಿ ತೆರಳಿದ ಸಂದರ್ಭ ಮೈಮೇಲೆ ಮರದ ರೆಂಬೆ ಮುರಿದು ಬಿದ್ದು ಚಾಲಕ ದಾರುಣವಾಗಿ ಮೃತಪಟ್ಟಿದ್ದಾರೆ. ಬಂಟ್ವಾಳ ಪೆರಾಜೆ ಬಳಿಯ ಕುಡೇಲು ನಿವಾಸಿ ಕಾಂತಪ್ಪ ಗೌಡ-ಗೀತಮ್ಮ ದಂಪತಿ ಪುತ್ರ, ಲಾರಿ ಚಾಲಕ ಕೆ. ಜಗದೀಶ ಗೌಡ (50) ಮೃತಪಟ್ಟವರು.
ಬುಧವಾರ ಬೆಳಗ್ಗೆ ಪೆರ್ಲ-ಸೀತಾಂಗೋಳಿ ರಸ್ತೆಯ ಬೆದ್ರಂಪಳ್ಳದಲ್ಲಿ ಘಟನೆ ನಡೆದಿದೆ. ಮೂಡಬಿದಿರೆಯಿಂದ ಕಾಸರಗೋಡಿಗೆ ಪಶು ಆಹಾರ ಸಾಗಿಸುತ್ತಿದ್ದ ಲಾರಿಯಲ್ಲಿ ಜಗದೀಶ ಚಾಲಕನಾಗಿದ್ದ ಇವರು, ವಿಟ್ಲ ದಾರಿಯಾಗಿ ಸೀತಾಂಗೋಳಿ ಮೂಲಕ ಕಾಸರಗೋಡಿಗೆ ಲೋಡ್ ಸಾಗಿಸುತ್ತಿದ್ದರು. ಬೆದ್ರಂಪಳ್ಳ ಬಳಿಯ ನಿರ್ಜನ ಪ್ರದೇಶದಲ್ಲಿ ಲಾರಿ ನಿಲ್ಲಿಸಿ ಮರದ ಕೆಳಗೆ ಮೂತ್ರಶಂಕೆಗಾಗಿ ತೆರಳಿದ್ದ ಜಗದೀಶ ಅವರ ಮೈಮೇಲೆ ಮರದ ರೆಂಬೆ ಬಿದ್ದಿದೆ. ಈ ಸಂದರ್ಭ ಜತೆಗಿದ್ದ ಕ್ಲೀನರ್ ಈ ಹಾದಿಯಾಗಿ ಆಗಮಿಸಿದ ವಾಹನವೊಂದರಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿರಲಿಲ್ಲ. ಬದಿಯಡ್ಕ ಠಾಣೆ ಪೆÇೀಲೀಸರು ಅಸಹಜ ಸಾವಿನ ಬಗ್ಗೆ ಕೇಸು ದಾಖಲಿಸಿಕೊಂಡಿದ್ದಾರೆ. ಜನರಲ್ ಆಸ್ಪತ್ರೆಯಲ್ಲಿ ಶವಮಹಜರು ನಡೆಸಿದ ನಂತರ ಮೃತದೇಹ ಮನೆಯವರಿಗೆ ಹಸ್ತಾಂತರಿಸಲಾಯಿತು.


