HEALTH TIPS

ಕೇರಳ ತುಳು ಅಕಾಡೆಮಿಯಿಂದ ಆಟಿಡೊಂಜಿ ದಿನ ಆಚರಣೆ: ವಿಶ್ವ ತುಳು ಆಯನ ಮಂಜೇಶ್ವರದಲ್ಲಿ ನಡೆಯಲಿ- ಶಾಸಕ ಎ ಕೆ ಎಂ ಅಶ್ರಫ್

ಉಪ್ಪಳ: ಪೈವಳಿಕೆಯಲ್ಲಿ ಕೇರಳ ತುಳು ಅಕಾಡೆಮಿಯ ವತಿಯಿಂದ ಭಾನುವಾರ "ಆಟಿಡೊಂಜಿ ದಿನ" ಕಾರ್ಯಕ್ರಮ ನಡೆಯಿತು. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ,  ಸಮಾಜದ ಸ್ವಾಸ್ಥ್ಯಕ್ಕೆ ಅನುಕರಣೀಯ ಸಂದೇಶ ಸಾರುವ ಈ ಆಟಿಡೊಂಜಿ ದಿನ ಕಾರ್ಯಕ್ರಮ ನಿಜವಾಗಿಯೂ ಅಭಿನಂದನಾರ್ಹ ಎಂದರು. ಸಮಾಜದಲ್ಲಿ ರೋಗರುಜಿನಗಳನ್ನು ಇಲ್ಲವಾಗಿಸುವಲ್ಲಿ ಆಟಿ ಕಳಂಜದ ಮಹಿಮೆಯ ಬಗ್ಗೆ  ಕೂಡ ಅವರು ನೆನಪಿಸಿದರು. ತುಳು ಭಾಷೆ ಸಂಸ್ಕøತಿಯನ್ನು ಬೆಳೆಸುವಲ್ಲಿ ಅಕಾಡೆಮಿ ಇನ್ನಷ್ಟು ಶ್ರಮಿಸಲಿ, ಮುಂದಿನ ದಿನದಲ್ಲಿ ವಿಶ್ವ ತುಳು ಸಮ್ಮೇಳನ ಮಂಜೇಶ್ವರದಲ್ಲಿ ನಡೆಯಲಿ ಎಂದು ಹಾರೈಸಿದರು. 

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಚಾಲನೆಕೊಟ್ಟ ಕಯ್ಯಾರು ಕ್ರಿಸ್ತರಾಜ ದೇವಾಲಯದ ಧರ್ಮಗುರು ವಂದನೀಯ ಫಾದರ್ ವಿಶಾಲ್ ಮೋನಿಸ್ ಅವರು ಮಾತನಾಡಿ, ತುಳು ಭಾಷೆ, ಸಂಸ್ಕøತಿಯನ್ನು ಉಳಿಸುವಲ್ಲಿ ತುಳು ಅಕಾಡೆಮಿಯ ಪಾತ್ರ ಬಲು ದೊಡ್ಡದು. ಮುಂದಿನ ದಿನಗಳಲ್ಲಿ ವೈವಿದ್ಯಮಯ ತುಳು ಉತ್ಸವ ಮುಂತಾದ  ತುಳು ಕಾರ್ಯಕ್ರಮಗಳನ್ನು ಸಂಘಟಿಸುವಂತಾಗಲಿ ಎಂದು ಹಾರೈಸಿದರು. 

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪೈವಳಿಕೆ ಅರಮನೆಯ ರಂಗತ್ರೈ ಬಲ್ಲಾಳ ಅರಸರು ಮಾತನಾಡಿ, ಹಿಂದಿನ ತುಳು ಸಂಪ್ರದಾಯವನ್ನು  ಉಳಿಸುವಲ್ಲಿ ಅಕಾಡೆಮಿ ಕಾರ್ಯಕ್ಕೆ ದೇವರ ಆಶೀರ್ವಾದ ಸದಾ ಇದೆ. ಜನರ ಎಲ್ಲಾ ರೋಗರುಜಿನಗಳು ದೂರವಾಗಲಿ ಎಂದರು.

ರಂಗಭೂಮಿ ಕಲಾವಿದ ರಾಮಕೃಷ್ಣ ಕಡಂಬಾರ್ ಮಾತನಾಡಿ, ಹಿಂದಿನ ಕಾಲದಲ್ಲಿ ಎಷ್ಟೇ ಸಿರಿವಂತರಾದರೂ, ಬಡವರಾದರೂ ಆಟಿ ತಿಂಗಳಲ್ಲಿ ಕಷ್ಟ ಅನುಭವಿಸುತ್ತಿದ್ದರು. ತುಳು ರಸಭರಿತ ಭಾಷೆ, ನಮಗೆ ಇದು ಭಾಷೆ ಮಾತ್ರ ಅಲ್ಲ ನಮ್ಮ ಬದುಕು. ತುಳು ಭಾಷೆಗೆ ರಾಜಶ್ರಯ ಅಗತ್ಯ ಇಲ್ಲ. ಇದಕ್ಕೆ ಹೃದಯಾಶ್ರಯ ಇದೆ.  ತುಳು ಸಂಸ್ಕೃತಿಯನ್ನು ಇನ್ನಷ್ಟು ಬೆಳೆಸುವ ಎಂದರು. ಆಟಿ ತಿಂಗಳಲ್ಲಿ ಎಲ್ಲಾ ಧರ್ಮದ ಬಾಂಧವರು ಸೇರಿ ಹಂಚಿ ತಿನ್ನುವ ಸಂಪ್ರದಾಯ ಬಹಳ ಹಿಂದಿನಿಂದಲೂ ಇದೆ ಎಂದರು. 

ತುಳು ಅಕಾಡೆಮಿ ಮಾಜಿ ಅಧ್ಯಕ್ಷ, ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಎಂ. ಉಮೇಶ್ ಸಾಲಿಯಾನ್ ಮಾತನಾಡಿ, ಆಟಿ ತಿಂಗಳು ಸೇವಿಸುವ ವಿಶೇಷ ತಿನಸುಗಳು ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತವೆ ಎಂದರು. ತುಳು ಅಕಾಡೆಮಿ ಇನ್ನಷ್ಟು ಬೆಳೆಯಲಿ. ಜಾತಿ, ಭೇದ, ಮತ ಧರ್ಮತೀತವಾಗಿ ಎಲ್ಲಾ ತುಳುವರನ್ನು ಒಗ್ಗೂಡಿಸುವ ಕನಸು ಹೊತ್ತ ಅಕಾಡೆಮಿ ಅದರಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು. 

ಗಣ್ಯರಾದ ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಂತಿ ಕೆ., ಅಬ್ದುಲ್ ರಝಕ್ ಚಿಪ್ಪಾರ್, ಡಾ. ಹರೀಶ್ ಬೋಟ್ಟಾರಿ, ಸುಕುಮಾರ ಯು., ಬಾಬು ಪಾಚ್ಲಂಪಾರೆ, ಮೋನಪ್ಪ ಶೆಟ್ಟಿ ಬಾಯಾರ್, ಅಶೋಕ್ ಎಮ್. ಸಿ. ಲಾಲ್ ಭಾಗ್, ಮೀನಾಕ್ಷಿ ಬೊಡ್ಡೋಡಿ, ದಯಾನಂದ ಬಂಗೇರ, ಝೆಡ್. ಎ. ಕಯ್ಯಾರ್, ಸಿ.ಡಿ.ಎಸ್.ಅಧ್ಯಕ್ಷೆ ಚಂದ್ರಕಲಾ, ಎಂ.ನಾ. ಚಂಬಲ್ತಿಮಾರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಅಕಾಡೆಮಿ ಅಧ್ಯಕ್ಷ ಕೆ.ಆರ್. ಜಯಾನಂದ ಮಾತನಾಡಿ, ಕೇರಳ ತುಳು ಅಕಾಡೆಮಿ ತುಳು ಭಾಷೆ ಸಂಸ್ಕೃತಿಯನ್ನು ರಕ್ಷಿಸಲು ಕಟಿಭದ್ದವಾಗಿದೆ ಎಂದರು. ಕಾರ್ಯಕ್ರಮಕ್ಕೆ ಸಹಕರಿಸಿ ಪ್ರೋತ್ಸಾಹಿಸಿದ, ಹಾರೈಸಿದ, ಆಶೀರ್ವದಿಸಿದ ಎಲ್ಲರಿಗೂ ನಾವು ಚಿರಋಣಿ ಎಂದರು. ಮುಂದೆಯೂ ನಿಮ್ಮೆಲ್ಲರ ಬೆಂಬಲ ಅಕಾಡೆಮಿ ವತಿಯಿಂದ ಇನ್ನಷ್ಟು ತುಳು ಕಾರ್ಯಕ್ರಮವನ್ನು ಸಂಘಟಿಸುವ ಭರವಸೆಯನ್ನು ನೀಡಿದರು. 

ಸಮಾರಂಭದಲ್ಲಿ ತುಳುನಾಡಿನ ಸಾಧಕರಾದ  ಈಶ್ವರ್ ಮಲ್ಪೆ, ಪಿ.ಆರ್.ಶೆಟ್ಟಿ, ಕೌಡೂರ್ ಮಾರಪ್ಪ ಭಂಡಾರಿ, ರಮೇಶ್ ಶೆಟ್ಟಿ ಬಾಯಾರ್,  ಸುರೇಂದ್ರ ಕೋಟ್ಯಾನ್, ಕಾವ್ಯಶ್ರೀ ಪೂಜಾರಿ, ಗಹನ್ ಕೆ.ಎಲ್. ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಶ್ರೀ ಈಶ್ವರ ಮಲ್ಪೆ ಮಾತನಾಡಿ,  ತುಳುವರಾದ ನಾವು ಎಷ್ಟೇ ಕಷ್ಟವಿದ್ದರೂ ಆತ್ಮಹತ್ಯೆಯಂಥಹ ಹೀನ ಕೃತ್ಯಕ್ಕೆ ಇಳಿಯಬಾರದು. ಹಿರಿಯರನ್ನು ಗೌರವಿಸಬೇಕು,  ಒಗ್ಗಟ್ಟಾಗಿ ಸಮಾಜದ ಒಳಿತಿಗಾಗಿ ಶ್ರಮಿಸೋಣ ಎಂದರು. ಅಕಾಡೆಮಿ ಸದಸ್ಯ ಅಜಿತ್ ಎಮ್. ಸಿ.ಸ್ವಾಗತಿಸಿ, ಅಬ್ದುಲ್ಲ ಕೆ ವಂದಿಸಿದರು. ದೇವಿಪ್ರಸಾದ್ ಶೆಟ್ಟಿ ಬೆಜ್ಜ ತುಳುವಿನಲ್ಲಿ ಕಾರ್ಯಕ್ರಮ ನಿರೂಪಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries