ಕಾಸರಗೋಡು: "ಪ್ರಾಚೀನ ಕಾವ್ಯಗಳ ವಾಚನ-ವ್ಯಾಖ್ಯಾನಗಳೆಂದರೆ ನಿಜವಾದ ಸರಸ್ವತಿಯ ಆರಾಧನೆ. ಗಮಕ ಕಲೆಯೆಂದರೂ ಇದುವೇ ಆಗಿದೆ. ಇದರಲ್ಲಿ ಸಾಹಿತ್ಯದ ರಸಪಾಕವೇ ಅಡಗಿದೆ" ಎಂದು ಸಾಹಿತಿ, ಶಿಕ್ಷಣತಜ್ಞ ವಿ.ಬಿ.ಕುಳಮರ್ವ ಅಭಿಪ್ರಾಯ ಪಟ್ಟರು.
ಅವರು ಇತ್ತೀಚೆಗೆ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ವೇದಿಕೆಯಲ್ಲಿ ಗಮಕ ಕಲಾ ಪರಿಷತ್ತು ಮತ್ತು ಸಿರಿಗನ್ನಡ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಗಮಕ ಶ್ರಾವಣದ ಸರಣಿ ಕಾರ್ಯಕ್ರಮದ ಸಮಗ್ರ ಪ್ರಸ್ತಾವನೆಗೈದು ಮಾತನಾಡಿದರು.
ಭಾಗವತ ಪರಂಪರೆಯಲ್ಲಿಯೇ ಬೆಳೆದುಬಂದ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಅವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು ಗಮಕ ಕಲೆಯ ಮಹತ್ವವನ್ನು ವಿವರಿಸಿದರು. ಶ್ರೀ ತೆಕ್ಕೇಕೆರೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕುಳಮರ್ವ ಶಂಕರ ಶರ್ಮಾ ವಿರಚಿತ "ಉತ್ತರಕಾಂಡ ಕಾವ್ಯಧಾರಾ" ಎಂಬ ಮಹಾಕಾವ್ಯದಿಂದಾಯ್ದ ಭಾಗವನ್ನು ಗಾಯಕಿ ಯಶೋದಾ ಭಟ್ ಉಪ್ಪಂಗಳ ಅವರು ಸುಶ್ರಾವ್ಯವಾಗಿ ವಾಚಿಸಿದರು. ಗಮಕಿ ಗುರುಮೂರ್ತಿ ನಾಯ್ಕಾಪು ವ್ಯಾಖ್ಯಾನಗೈದರು.
ಜಗದೀಶ ಕೂಡ್ಳು ಸ್ವಾಗತಿಸಿ, ಜಯಲಕ್ಷ್ಮಿ ಹೊಳ್ಳ ನಿರ್ವಹಿಸಿ ವಂದಿಸಿದರು. ವಿ.ಬಿ.ಕುಳಮರ್ವ ವಿರಚಿತ ಗಮಕ ಗೀತೆಯನ್ನು ಯಶೋದಾ ಭಟ್ ಪ್ರಾರ್ಥನೆಯ ರೂಪದಲ್ಲಿ ಹಾಡಿದರು. ಉತ್ತರಕಾಂಡ ಕಾವ್ಯಧಾರಾ ಮಹಾಕಾವ್ಯದ ಕರ್ತೃ ಕುಳಮರ್ವ ಶಂಕರ ಶರ್ಮಾ ಅವರನ್ನು ಸಿರಿಬಾಗಿಲು ಪ್ರತಿಷ್ಠಾನದ ವತಿಯಿಂದ ಶಾಲು ಹೊದೆಸಿ ಗೌರವಿಸಲಾಯಿತು.
ವಿ.ಬಿ.ಕುಳಮರ್ವ ಅವರ ಮುತ್ತಾತ ದಿ.ಕುಳಮರ್ವ ವೆಂಕಪ್ಪ ಭಟ್ಟರು ಇನ್ನೂರು ವರ್ಷಗಳ ಹಿಂದೆ ತಾಳೆಗರಿಯಲ್ಲಿ ಕಬ್ಬಿಣದ ಕಂಠದ ಮೂಲಕ ಬರೆದ ಬೃಹತ್ ತೊರವೆ ರಾಮಾಯಣ ಗ್ರಂಥವು ವೇದಿಕೆಯಲ್ಲಿ ವಿಶೇಷವಾಗಿ ಜನರನ್ನು ಆಕರ್ಷಿತ್ತು.

.jpg)
