ಮಂಜೇಶ್ವರ: ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಹಿರಿಯರ ನೆನಪು ಕಾರ್ಯಕ್ರಮ ಸರಣಿಯಲ್ಲಿ ಗಡಿನಾಡಿನ ಹಿರಿಯ ಬಹುಮುಖಿ ಕಲಾವಿದ ಕೀರ್ತಿಶೇಷ ಉಪ್ಪಳ ಕೃಷ್ಣ ಮಾಸ್ತರ್ ಅವರ ಸಂಸ್ಮರಣೆ ಹಾಗೂ ಯಕ್ಷಬಳಗ ಹೊಸಂಗಡಿ ತಂಡದ ಕರ್ಕಾಟಕ ಮಾಸ ಯಕ್ಷಗಾನ ತಾಳಮದ್ದಳೆ ಕೂಟ ಸಮಾರೋಪ ಸಮಾರಂಭ ಇತ್ತೀಚೆಗೆ ಮೂಡಂಬೈಲು ಅಪ್ಪತ್ತಿಮಾರು ಶಿವರಾಮ ಪದಕಣ್ಣಾಯರ ಮನೆಯಲ್ಲಿ ಜರಗಿತು.
ಸಮಾರಂಭವನ್ನು ಶಿವರಾಮ ಪದಕಣ್ಣಾಯ ಅಪ್ಪತ್ತಿಮಾರು ದಂಪತಿಗಳು ದೀಪಬೆಳಗಿಸಿ ಉದ್ಘಾಟಿಸಿದರು. ವೇದಮೂರ್ತಿ ದಡ್ಡಂಗಡಿ ಬಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಯೋಗೀಶ ರಾವ್ ಚಿಗುರುಪಾದೆ ಅವರು ಉಪ್ಪಳ ಕೃಷ್ಣ ಮಾಸ್ತರ್ ಅವರ ನೆನಪನ್ನು ಹಂಚಿಕೊಂಡರು. ಈ ಸಂದರ್ಭ ಮಾತನಾಡಿದ ಅವರು, ಉಪ್ಪಳ ಕೃಷ್ಣ ಮಾಸ್ತರ್ ಅಯ್ಯಪ್ಪ ಮಾಸ್ತರ್ ಎಂದೇ ಖ್ಯಾತರಾದವರು. ಗಡಿನಾಡಿನ ಸಾಂಸ್ಕøತಿಕ ರಂಗಕ್ಕೆ ಅಪರಿಮಿತ ಕೊಡುಗಡಯನ್ನು ಶ್ರೀಯುತರು ನೀಡಿದ್ದಾರೆ. ಆದರ್ಶ ಶಿಕ್ಷಕರಾಗಿ, ಓರ್ವ ಯಕ್ಷಗಾನ ವೇಷಧಾರಿಯಾಗಿ, ಅರ್ಥಧಾರಿಯಾಗಿ, ಯಕ್ಷಗಾನ ಗುರುಗಳಾಗಿ ಸೇವೆಗೈದವರು. ನಾಟಕ, ಭರತನಾಟ್ಯ, ಭಜನೆ, ಜಾನಪದ ನೃತ್ಯ, ಇಂದ್ರಜಾಲ, ಹೀಗೆ ಎಲ್ಲಾರಂಗದಲ್ಲೂ ಸಾಧನೆಗೈದಿದ್ದರು. ಎಲ್ಲಾ ವಿಭಾಗದಲ್ಲೂ ಪರಿಣತಿ ಹೊಂದಿದ್ದ ಕೃಷ್ಣ ಮಾಸ್ತರ್ ಕಾಸರಗೋಡಿನಿಂದ ಉಡುಪಿವರೆಗೆ ತನಗೆ ತಿಳಿದಿದ್ದ ವಿದ್ಯೆಯನ್ನು ಶಿಷ್ಯರಿಗೆ ಧಾರೆ ಎರೆದು ಅಪರಿಮಿತ ಶಿಷ್ಯ ವರ್ಗವನ್ನು ಹೊಂದಿದ್ದರು. ಬೆಂಗಳೂರಲ್ಲಿ ಶಾಸಕರ ದಿನಾಚರಣೆಯ ಸಂದರ್ಭ, ಮಾಜಿ ಮಂತ್ರಿ ಶಾಸಕರಾಗಿದ್ದ ವೀರಪ್ಪ ಮೊಯಿಲಿ, ರಾಮಕೃಷ್ಣ ಹೆಗಡೆ, ಜೀವರಾಜ ಆಳ್ವರಂತವರಿಗೆ ಯಕ್ಷಗಾನ ಕಲಿಸಿ ಕುಣಿಸಿದ ಕೀರ್ತಿ ಅಯ್ಯಪ್ಪ ಮಾಸ್ತರರಿಗೆ ಸಲ್ಲುತ್ತದೆ. ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾಗಿದ್ದರು ಎಂದು ನೆನಪಿಸಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು, ಕನ್ನಡ ಸಾಹಿತ್ಯ ಪರಿಷತ್ ಗಡಿನಾಡು ಕಾಸರಗೋಡು ಘಟಕದ ಅಧ್ಯಕ್ಷ ಡಾ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ, ವೇದಮೂರ್ತಿ ಚೇತನರಾಮ ಪಜಿಂಗಾರು, ಭಾಸ್ಕರ ಕೋಳ್ಯೂರು, ಅಭ್ಯಾಗತರಾಗಿ ಭಾಗವಹಿಸಿದ್ದರು.
ಯಕ್ಷಬಳಗ ಹೊಸಂಗಡಿ ತಂಡದ ನಾಗರಾಜ ಪದಕಣ್ಣಾಯ ಸ್ವಾಗತಿಸಿ, ನ್ಯಾಯವಾದಿ ವಿಠಲ ಭಟ್ ಮೊಗಸಾಲೆ ನಿರ್ವಹಿಸಿದರು.
ಸಮಾರಂಭದಲ್ಲಿ ಹಿಮ್ಮೇಳಗುರುಗಳು ಹಾಗೂ ಹಿರಿಯ ಹಿಮ್ಮೇಳವಾದಕರಾದ ಭಾಸ್ಕರ ಕೋಳ್ಯೂರು ಅವರನ್ನು ಗಣ್ಯರ ಸಮಕ್ಷಮ ಗೌರವಿಸಲಾಯಿತು. ನುರಿತ ಕಲಾವಿದರಿಂದ ಭೀಷ್ಮಸೇನಾಧಿಪತ್ಯ ಸ್ವೀಕಾರ ತಾಳಮದ್ದಳೆ ಜರಗಿತು. ತಾಳಮದ್ದಳೆ ಹಿಮ್ಮೇಳದಲ್ಲಿ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ, ರತ್ನಾಕರ ಆಳ್ವ ದೇವಿಪುರ ತಲಪಾಡಿ, ಚೆಂಡೆ ಮದ್ದಳೆಯಲ್ಲಿ ಭಾಸ್ಕರ ಕೋಳ್ಯೂರು, ರಾಜಾರಾಮ ಬಲ್ಲಾಳ ಚಿಪ್ಪಾರು, ಅಚ್ಯುತ ಪದಕಣ್ಣಾಯ, ಚಕ್ರತಾಳ ಪ್ರಕಾಶ್ ಕಿನ್ಯ ಸಹಕರಿಸಿದರು. ಪಾತ್ರವರ್ಗದಲ್ಲಿ ವಿಟ್ಲ ಶಂಭು ಶರ್ಮ, ರಾಧಾಕೃಷ್ಣ ಕಲ್ಚಾರ್ ರಂಜಿಸಿದರು.

.jpg)
